ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಆಲೂರು ತಾಲೂಕು ಮಿನಿ ವಿಧಾನಸೌಧ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಡಿವಾಳ ಮಾಚಿದೇವ ಸಂಘದ ಸಹಯೋಗದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿರಸ್ತೇದಾರ್ ಅಂಕೆಗೌಡ, ಸಮಾಜದ ಅಭಿವೃದ್ಧಿಗೆ ಮಡಿವಾಳ ಮಾಚಿದೇವರ ಕೊಡುಗೆ ಅಪಾರವಾಗಿದೆ. ಅವರ ದಾರಿಯಲ್ಲಿ ಎಲ್ಲರೂ ನಡೆಯಬೇಕಾದ ಅವಶ್ಯಕತೆಯಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಎಸ್. ಮಂಜೇಗೌಡ ಮಾತನಾಡಿ, ಬಸವಣ್ಣನವರು ಸೇರಿದಂತೆ ಅನೇಕ ಶರಣರು ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಜನರಲ್ಲಿರುವ ಮೌಢ್ಯಗಳನ್ನು ತೊಲಗಿಸಲು ಯತ್ನಿಸಿದ್ದಾರೆ. ಅಂತಹ ಮಹಾನ್ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲದು ಎಂದರು.ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ರಮೇಶ್ ಡಿಬ್ಬೂರು ಮಾತನಾಡಿ, ಮಡಿವಾಳ ಮಾಚಿದೇವರು ತಮ್ಮ ವಚನಗಳಲ್ಲಿ ಕಾಯಕಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದು ಭಕ್ತಿ ಮತ್ತು ನಿಷ್ಠೆಯಿಂದ ಕಾಯಕದಲ್ಲಿ ನಿರತರಾದರೆ ದೇವರು ಸಹ ಒಲಿಯುವನು ಎಂದು ಸಾರಿದ್ದಾರೆ. ನಡೆನುಡಿ ತಪ್ಪದೇ, ತತ್ವ ಸಿದ್ಧಾಂತವನ್ನು ಅನುಸರಿಸಿ ನಮ್ಮ ವ್ಯಕ್ತಿತ್ವವನ್ನು ಉನ್ನತಗೊಳಿಸಬೇಕೆಂದು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಶ್ರೀಸಾಮಾನ್ಯನಾಗಿದ್ದ ಮಡಿವಾಳ ಮಾಚಿದೇವರ ಜೀವನ ಸಂದೇಶದ ಕಥೆಯನ್ನು ಅರ್ಥಪೂರ್ಣವಾಗಿ ತಿಳಿಸಿದ ಅವರು, 12ನೇ ಶತಮಾನದ ವಚನ ಕ್ರಾಂತಿಯೂ ಕನ್ನಡಕ್ಕೆ ದೊಡ್ಡ ಸಂಪತ್ತು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ 6ನೇ ತರಗತಿಯ ವಿದ್ಯಾರ್ಥಿ ನಿರ್ಮಿತಯಿಂದ ಭರತನಾಟ್ಯ ಪ್ರದರ್ಶನವಾಯಿತು ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವರದರಾಜು, ಹಿಂದುಳಿದ ವರ್ಗಗಳ ಹಿರಿಯ ಮುಖಂಡ ಬಿ.ಸಿ.ಶಂಕರಾಚಾರ್, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ತಾಲೂಕು ಸಂಚಾಲಕ ಮುಖಂಡ ಬಸವರಾಜ್ ಗೇಕರವಳ್ಳಿ, ನಿವೃತ್ತ ಶಿಕ್ಷಕರಾದ ಮುತ್ತಣ್ಣ, ಬೆಳ್ಮೆ ನಂಜಪ್ಪ, ಗುಲಾಮ್ ಸತ್ತಾರ್, ಮಡಿವಾಳ ಸಂಘದ ತಾಲೂಕು ಉಪಾಧ್ಯಕ್ಷ ಮೋಹನ್ ಹೊನ್ನವಳ್ಳಿ, ಕಾರ್ಯದರ್ಶಿ ಪ್ರದೀಪ್ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.