ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ವೇತನದ ಸೌಲಭ್ಯ ಪಡೆದರೆ ಸಾಲದು, ಸಂಸ್ಥೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಆ ಉತ್ಸಾಹ ಬರಬೇಕು ಎಂದು ಪ್ರೇರಣಾ ಸಂಸ್ಥೆ ಸಿಇಒ ರಾಮ ಶಾಸ್ತ್ರಿ ತಿಳಿಸಿದರು.ನಗರದ ರೂರಲ್ ಕಾಲೇಜಿನ ಎಸ್.ಕೆ.ಸ್ಮಾರಕ ಭವನದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾಯಕ್ರಮದಲ್ಲಿ ಮಾತನಾಡಿದ ಅವರು, ದಾನಿಗಳಿಂದ ನಮ್ಮ ಸಂಸ್ಥೆಯ ಮೂಲಕ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ. ರಾಜ್ಯದ 430 ಸರ್ಕಾರಿ ಕಾಲೇಜುಗಳು, ಸುಮಾರು 370 ಅನುದಾನಿತ ಕಾಲೇಜುಗಳು, 1200 ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಸುಮಾರು 2000 ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿದ್ದೇವೆ ಎಂದರು.
ಕಳೆದ ಬಾರಿ ಈ ಸಂಸ್ಥೆಯ 70 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿದ್ದೇವೆ, ಆದರೆ ಈ ಬಾರಿ 110 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದು ಒಳ್ಳೆಯ ಬೆಳವಣಿಗೆ. ಆದರೆ ನಿಮ್ಮ ಕಾಲೇಜಿನಲ್ಲಿ 1500 ವಿದ್ಯಾರ್ಥಿಗಳಿದ್ದಾರೆ, ಆದರೆ ಶೇಕಡ 10 % ರಷ್ಟು ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಉಳಿದವರು ವಿದ್ಯಾರ್ಥಿ ವೇತನ ಪಡೆಯುವ ಉತ್ಸಾಹ ಕಳೆದುಕೊಂಡಿದ್ದಾರೆ ಎಂದರು.ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಶಿಕ್ಷಣದ ಜೊತೆಗೆ ಕೌಶಲ್ಯವೂ ಇರಬೇಕು, ಅದನ್ನು ನಾವು ಕೊಡುತ್ತಿದ್ದೇವೆ. ಅದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಶತಮಾನಗಳ ಹಿಂದೆಯೇ ಶಿಕ್ಷಣ ಕೌಶಲ್ಯಕ್ಕೆ ಒತ್ತು ಕೊಡಬೇಕು ಎಂದು ಚಿಂತನೆ ನಡೆಸಿ ಸಂಸ್ಥೆಯನ್ನು ಕಟ್ಟಿದ್ದಾರೆ, ಇಂತಹ ಸಂಸ್ಥೆಯಲ್ಲಿ ನಾವೆಲ್ಲರೂ ವಿದ್ಯೆ ಕಲಿಯುತಿದ್ದೇವೆ ಎಂಬ ಭಾವನೆ ಬಂದರೆ ವಿದ್ಯಾರ್ಥಿಗಳ ದೃಷ್ಟಿಕೋನವೇ ಬದಲಾಗುತ್ತದೆ ಎಂದರು.
ಆರ್‌ಇಎಸ್ ಅಧ್ಯಕ್ಷ ಶ್ರೀಕಂಠು ಮಾತನಾಡಿ, ಎಸ್. ಕರಿಯಪ್ಪನವರು ಬಹಳಷ್ಟು ಶ್ರಮಪಟ್ಟು ಅಂದಿನ ಕಾಲಕ್ಕೆ ತಕ್ಕಂತೆ ಸಂಸ್ಥೆಯನ್ನು ಕಟ್ಟಿದ್ದಾರೆ, ಆಗ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಲು ಯಾವ ಸಂಘ ಸಂಸ್ಥೆ , ದಾನಿಗಳೂ ಇರಲಿಲ್ಲ. ಆದರೀಗ ಪ್ರೇರಣಾ ಸಂಸ್ಥೆ ನಮ್ಮ ಸಂಸ್ಥೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಲು ಮುಂದೆ ಬಂದಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಾಲಕೃಷ್ಣ, ಐಕ್ಯೂಎಸಿ ಸಂಯೋಜಕ ತಮ್ಮಣ್ಣಗೌಡ, ಸಮಾಜ ಶಾಸ್ತ್ರದ ಮುಖ್ಯಸ್ಥ ದೇವರಾಜು, ಸಂಚಾಲಕಿ ರೀನಾ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.