ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕು

| Published : Feb 22 2024, 01:45 AM IST

ಸಾರಾಂಶ

ಸಂವಿಧಾನ ಪೀಠಿಕೆಯಲ್ಲಿ ಹೇಳಿರುವ ಹಾಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಎಲ್ಲರಿಗೂ ಒದಗಿಸುವುದೇ ಅಂತರರಾಷ್ಟ್ರೀಯ ಸಾಮಾಜಿಕ ನ್ಯಾಯದಿನಾಚರಣೆಯ ಉದ್ದೇಶ. ಸಂವಿಧಾನ ಪೀಠಿಕೆಯಲ್ಲೂ ಇದನ್ನೇ ಹೇಳಲಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಬಡತನ, ಅನಕ್ಷರತೆ ಹೋಗಲಾಡಿಸಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶವೇ ಸಾಮಾಜಿಕ ನ್ಯಾಯ ದಿನಾಚರಣೆಯ ಪ್ರಮುಖ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ತಾಲೂಕಿನ ಛತ್ರಕೋಡಿಹಳ್ಳಿಯ ಆಚಾರ್ಯ ಪಾಠಶಾಲೆಯಲ್ಲಿ ಅಂತರರಾಷ್ಟ್ರೀಯ ಸಾಮಾಜಿಕ ನ್ಯಾಯದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಸಮನ್ವಯತೆ

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಾಮಾಜಿಕ ಅಭಿವೃದ್ಧಿಯ ಸಲುವಾಗಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರತಿವರ್ಷವೂ ಈ ದಿನವನ್ನು ಸಾಮಾಜಿಕ ದಿನವನ್ನಾಗಿ ಆಚರಿಸಲು ನಿರ್ಣಯ ಮಾಡಿದ್ದರ ಹಿನ್ನೆಲೆಯಲ್ಲಿ ಈ ದಿನ ಆಚರಿಸಲಾಗುತ್ತಿದೆ. ಭಾರತದ ಸಂವಿಧಾನ ಪೀಠಿಕೆಯಲ್ಲಿ ಹೇಳಿರುವ ಹಾಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಎಲ್ಲರಿಗೂ ಒದಗಿಸುವ ಉದ್ದೇಶ ವ್ಯಕ್ತವಾಗಿದೆ. ಸಂಪೂರ್ಣ ಉದ್ಯೋಗದ ಜತೆಗೆ ಸಾಮಾಜಿಕ ಸಮನ್ವಯತೆ ಕಾಪಾಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದರು.ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ ಎಂದ ಅವರು ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯವಿದೆ, ನಿಮ್ಮ ಸ್ನೇಹಿತರಿಗೆ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ಶಿಕ್ಷಣ ಸಂಯೋಜಕ ರಾಘವೇಂದ್ರ ಮಾತನಾಡಿ,ಸಂವಿಧಾನ ಶಿಕ್ಷಣದ ಹಕ್ಕು ನೀಡಿದೆ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಸಂವಿಧಾನದ ಉದ್ದೇಶವಾಗಿದೆ. ಶಾಲೆಗೆ ಗೈರಾಗಿ ದುಡಿಮೆ ಮಾಡುತ್ತಿದ್ದರೆ ಕೂಡಲೇ ನಿಮ್ಮ ಶಿಕ್ಷಕರಿಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಕುರಿತು ಅರಿವು ನೀಡಿದ್ದು, ಲಿಂಗ ಪತ್ತೆ ನಿಷೇಧ ಕಾಯಿದೆ, ಬಾಲ್ಯವಿವಾಹ ನಿಷೇಧ, ಹೆಣ್ಣು ಭ್ರೂಣ ಹತ್ಯೆ ಕಾಯಿದೆ, ಬಾಲಕಾರ್ಮಿಕ ನಿಷೇಧ, ಹಾಗೂ ಮೋಟಾರ್ ವಾಹನ ಕಾಯಿದೆಗಳ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಿ ಅಸ್ಮಾ ವಹಿಸಿದ್ದು, ಶಿಕ್ಷಕರಾದ ನಾಗೇಶ್, ರಮೇಶ್ ಮತ್ತಿತರರಿದ್ದರು.(