ಸಾರಾಂಶ
ಮಕ್ಕಳಿಂದ ವೃದ್ಧರವರೆಗೂ ವಯಸ್ಸು, ವರ್ಗ, ಜಾತಿ, ಧರ್ಮ ಹಾಗೂ ಅಂತಸ್ತಿನ ಭೇದಭಾವವಿಲ್ಲದೆ ಎಲ್ಲರೂ ಕಾನೂನನ್ನು ತಿಳಿದುಕೊಳ್ಳಬೇಕು. ಪಾಲಿಸಲೂ ಬೇಕು. ನನಗೆ ಕಾನೂನಿನ ಅರಿವು ಇಲ್ಲದೆ ತಪ್ಪು ಮಾಡಿದೆ ಎಂದರೂ ಕಾನೂನಿನ ಕುಣಿಕೆಯಿಂದ ಪಾರಾಗುವ ಪ್ರಶ್ನೆಯೇ ಇಲ್ಲ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಈ ಭೂಮಿಯ ಮೇಲೆ ಮನುಷ್ಯ ಬದುಕಲು ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ ಕಾನೂನಿನ ತಿಳಿವಳಿಕೆ ಹಾಗೂ ಪಾಲನೆಯೂ ಅಷ್ಟೇ ಮುಖ್ಯ ಎಂದು ಕಾನೂನು ಸೇವಾ ಸಮಿತಿಯ ಸರ್ಕಾರಿ ಅಭಿಯೋಜಕಿ ವಾಣಿ ತಿಳಿಸಿದರು.ಪಟ್ಟಣದ ಸಿವಿಜಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ದಾಬಸ್‌ಪೇಟೆ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ತಂಬಾಕು ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳಿಂದ ವೃದ್ಧರವರೆಗೂ ವಯಸ್ಸು, ವರ್ಗ, ಜಾತಿ, ಧರ್ಮ ಹಾಗೂ ಅಂತಸ್ತಿನ ಭೇದಭಾವವಿಲ್ಲದೆ ಎಲ್ಲರೂ ಕಾನೂನನ್ನು ತಿಳಿದುಕೊಳ್ಳಬೇಕು. ಪಾಲಿಸಲೂ ಬೇಕು. ನನಗೆ ಕಾನೂನಿನ ಅರಿವು ಇಲ್ಲದೆ ತಪ್ಪು ಮಾಡಿದೆ ಎಂದರೂ ಕಾನೂನಿನ ಕುಣಿಕೆಯಿಂದ ಪಾರಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಿದ್ದಪ್ಪ ಮಾತನಾಡಿ ಕಾನೂನಿನ ತಿಳಿವಳಿಕೆ ಇದ್ದು ಅಥವಾ ಇಲ್ಲದೆಯೇ ತಪ್ಪು ಮಾಡಿದರೂ ಅದು ತಪ್ಪಾಗಿದ್ದು, ಎಲ್ಲರೂ ಕಾನೂನು ಅರಿತು ತಮ್ಮ ಇತಿಮಿತಿಯಲ್ಲಿ ನಡೆದುಕೊಂಡರೆ ಸುಖ, ಶಾಂತಿ, ನೆಮ್ಮದಿಯ ಬದುಕು ನಡೆಸಬಹುದು. ಆದ್ದರಿಂದಲೇ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.ತಂಬಾಕು ಉತ್ಪನ್ನ ಬಳಕೆ ಕಡಿಮೆಯಾಗಲಿ : ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ವೇದಾವತಿ ಮಂಜುನಾಥ್ ಮಾತನಾಡಿ ತಂಬಾಕು ಸೇವನೆಯಿಂದ ಯುವಶಕ್ತಿ ಹಾದಿ ತಪ್ಪುತ್ತಿದೆ. ಯುವ ಜನ ಜೀವನ ಆಯ್ಕೆ ಮಾಡಿಕೊಳ್ಳಬೇಕು ಹೊರತು ತಂಬಾಕನ್ನು ಅಲ್ಲ. ತಂಬಾಕು ರಹಿತ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಾಗಿ, ವರ್ಷವಿಡೀ ಈ ದಿನದ ಉದ್ದೇಶ ಪಾಲನೆಯಲ್ಲಿರಬೇಕು ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಕೋದಂಡರಾಮಯ್ಯ, ಮುಖ್ಯಶಿಕ್ಷಕ ಛತ್ರಪತಿ, ಪೊಲೀಸ್ ಸಿಬ್ಬಂದಿ ರಾಜೇಶ್, ತಾಲ್ಲೂಕು ಕಾನೂನು ಸೇವಾ ಸಮಿತಿಯ ಅರೆಕಾಲಿಕ ಸ್ವಯಂಸೇವಕರಾದ ಮಂಜುಳ, ದೀಪ ಹಾಗೂ ವಿದ್ಯಾರ್ಥಿಗಳಿದ್ದರು.