ಸಾರಾಂಶ
ರಾಜ್ಯದಲ್ಲಿ ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ ಪ್ರಬಲ ಲಿಂಗಾಯತ ಸಮಾಜಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನಮಾನ ಕಲ್ಪಿಸದೇ, ದ್ರೋಹ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ದಾವಣಗೆರೆ: ರಾಜ್ಯದಲ್ಲಿ ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ ಪ್ರಬಲ ಲಿಂಗಾಯತ ಸಮಾಜಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನಮಾನ ಕಲ್ಪಿಸದೇ, ದ್ರೋಹ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಆರೋಪಿಸಿದ್ದಾರೆ.
ಮೋದಿ ಸಂಪುಟದಲ್ಲಿ ಲಿಂಗಾಯತರಷ್ಟೇ ಅಲ್ಲ, ಪರಿಶಿಷ್ಟ ಜಾತಿ-ಪಂಗಡ, ಒಬಿಸಿಯವರಿಗೂ ಪ್ರಾತಿನಿಧ್ಯ ನೀಡದೇ, ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಲಾಗಿದೆ. ಮುಂಚಿನಿಂದಲೂ ಬಿಜೆಪಿಗೆ ಬೆಂಬಲಿಸಿಕೊಂಡು ಬಂದ ರಾಜ್ಯದ ಪ್ರಬಲ ಸಮುದಾಯ ಲಿಂಗಾಯತರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ದೂರಿದ್ದಾರೆ.ಕಳೆದೆರೆಡು ಸರ್ಕಾರಗಳಲ್ಲೂ ಲಿಂಗಾಯತ ಸಮುದಾಯಕ್ಕೆ ಕೇವಲ ರಾಜ್ಯ ದರ್ಜೆ ಸಚಿವರಾಗಿ ಮಾತ್ರ ಮೋದಿ ಅವಕಾಶ ನೀಡಿದ್ದರು. ಈ ಸಲವಾದರೂ ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾದರೂ, ಲಿಂಗಾಯತರಿಗೆ ಸಂಪುಟ ದರ್ಜೆ ಸಚಿವರಾಗಿ ಮಾಡಬೇಕಿತ್ತು. ಆದರೆ, ಲಿಂಗಾಯತರು ಬಿಜೆಪಿ ಮತ ಹಾಕುವುದಕ್ಕೆ ಮಾತ್ರ ಇದ್ದಾರೆ ಎಂಬುದಾಗಿ ನರೇಂದ್ರ ಮೋದಿ ಭಾವಿಸಿ, ಲಿಂಗಾಯತರನ್ನು 3ನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಲಿಂಗಾಯತ ಸಮುದಾಯದ ರಾಜ್ಯದ ನಾಯಕರು ಇನ್ನಾದರೂ ಬಿಜೆಪಿಗೆ ಬೆಂಬಲಿಸುವುದನ್ನು ಬಿಡಬೇಕು. ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದ ವರ್ಗಗಳಿಗೂ ಮೋದಿ ತಮ್ಮ ಸಂಪುಟದಲ್ಲಿ ರಾಜ್ಯದಿಂದ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ನರೇಂದ್ರ ಮೋದಿ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಡಿ.ಬಸವರಾಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.- - - -10ಕೆಡಿವಿಜಿ11: ಡಿ.ಬಸವರಾಜ