ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಭಾರೀ ಯಶಸ್ವಿಯಾಗಿದೆ. ಇದು ಉಭಯ ಪಕ್ಷಗಳಲ್ಲಿ ಸಂತಸವನ್ನುಂಟು ಮಾಡಿದೆ. ಇದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲೂ ಮುಂದುವರಿಯಲಿ ಎಂಬ ಒತ್ತಾಯ ಜೆಡಿಎಸ್‌ನದು. ಆದರೆ ಬಿಜೆಪಿ ಸಾಕಷ್ಟು ಬಲಿಷ್ಠವಾಗಿದೆ. ಇಲ್ಲಿ ಸ್ಥಾನ ಬಿಟ್ಟುಕೊಟ್ಟರೆ ಆ ಕ್ಷೇತ್ರದಲ್ಲಿನ ಮುಖಂಡರು ಸಿಟ್ಟಾದರೆ ಹೇಗೆ? ಎಂಬ ಆಲೋಚನೆ ಬಿಜೆಪಿಯದ್ದು.
ಒಂದು ಕಾಲದಲ್ಲಿ ಜೆಡಿಎಸ್ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಾಕಷ್ಟು ಸಂಘಟನೆ ಹೊಂದಿತ್ತು. ಸಾಕಷ್ಟು ಜನ ಶಾಸಕರು ಆಯ್ಕೆಯಾಗಿದ್ದುಂಟು. ಆದರೆ ವರ್ಷ ಉರುಳಿದಂತೆ ತನ್ನ ಶಕ್ತಿಯನ್ನು ಕುಂದಿಸಿಕೊಂಡಿತ್ತು. ಇದರಲ್ಲಿದ್ದ ನಾಯಕರೆಲ್ಲ ಬಿಜೆಪಿ, ಕಾಂಗ್ರೆಸ್ ಪಕ್ಷಗಳತ್ತ ಮುಖ ಮಾಡಿದರು. ಹೀಗಾಗಿ ಶಕ್ತಿ ಕಳೆದುಕೊಂಡಿತು. ಹಾಗಂತ ಜೆಡಿಎಸ್ ಅಭಿಮಾನಿಗಳು ಇಲ್ಲ ಅಂತೇನೂ ಅಲ್ಲ. ಈಗಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈ ಭಾಗಕ್ಕೆ ಬಂದರೆ ಸಾಕು ಜನಸಾಗರವೇ ಸೇರುತ್ತದೆ. ಆದರೆ ಚುನಾವಣೆಯಲ್ಲಿ ಮಾತ್ರ ಈ ಪಕ್ಷ ಗೆಲ್ಲುವುದಿಲ್ಲ.
ಹಾಗಂತ ಪಕ್ಷ ಸಂಘಟನೆಗೆ ಪ್ರಯತ್ನ ಪಟ್ಟಿಲ್ಲ ಅಂತೇನೂ ಇಲ್ಲ. ಕುಮಾರಸ್ವಾಮಿ ಹುಬ್ಬಳ್ಳಿಯಲ್ಲೇ ಮನೆ ಮಾಡಿಕೊಂಡು ಸಂಘಟನೆಗೆ ಪ್ರಯತ್ನಿಸಿದ್ದುಂಟು. ಆದರೂ ಪ್ರಯೋಜನ ಮಾತ್ರ ಶೂನ್ಯ. ಹಿರಿಯ ಗೌಡರು, ಬಂದಾಗ ಸೇರುವ ಜನ ಮತ ಹಾಕುವುದಿಲ್ಲ. ಜೆಡಿಎಸ್ ಗೆಲ್ಲುವುದಿಲ್ಲ. ಸುಮ್ಮನೆ ಅದಕ್ಕೆ ಮತ ಹಾಕಿ ವೇಸ್ಟ್ ಮಾಡಿಕೊಳ್ಳುವುದೇಕೆ? ಎಂಬ ಮನಸ್ಥಿತಿ ಈ ಭಾಗದ ಜನರಲ್ಲಿ ಮನೆ ಮಾಡಿದೆ.
ಬಿಜೆಪಿ- ಜೆಡಿಎಸ್ ಮೈತ್ರಿ:
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಭಾರಿ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಜೆಡಿಎಸ್ ತಾನು ಪಡೆದ ಎರಡು ಸ್ಥಾನಗಳಲ್ಲಿ ಗೆದ್ದಿದೆ ಅಷ್ಟೇ ಅಲ್ಲದೇ, ಹಳೇ ಮೈಸೂರು ಭಾಗದ ಏಳೆಂಟು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವಲ್ಲಿ ಜೆಡಿಎಸ್ ಪಾತ್ರ ಇಲ್ಲ ಎನ್ನಲು ಸಾಧ್ಯವಿಲ್ಲ. ಅಕ್ಷರಶಃ ಕಾಂಗ್ರೆಸ್‌ನ್ನು ಕಟ್ಟಿಹಾಕಲು ಈ ಮೈತ್ರಿ ಯಶಸ್ವಿಯಾಗಿದೆ.
ಇದೀಗ ಇದೇ ರೀತಿ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಯಲಿ. ಇದೀಗ ಎದುರಾಗಲಿರುವ ಜಿಪಂ, ತಾಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಮುಂದಿನ ಎಲ್ಲ ಚುನಾವಣೆಯಲ್ಲೂ ದೋಸ್ತಿ ಇದೇ ರೀತಿ ಇರಲಿ ಎಂಬುದು ಜೆಡಿಎಸ್‌ನ ಆಶಯ. ಇದರಿಂದ ಸಂಘಟನೆಯಿಲ್ಲದ ಕಂಗಾಲಾಗಿರುವ ಜೆಡಿಎಸ್‌ಗೆ ಕೆಲವೊಂದಿಷ್ಟು ಸ್ಥಾನಗಳು ದೊರೆಯಲಿವೆ. ಅವುಗಳಲ್ಲಿ ಗೆದ್ದುಕೊಂಡರೆ ಮತ್ತೆ ಪಕ್ಷ ಸಂಘಟನೆ ಮಾಡಬಹುದು ಎಂಬುದು ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಮುಖಂಡರ ಇರಾದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಬೇಕು. ಮುಂದೆ ಕಾಂಗ್ರೆಸ್ ವಿರುದ್ಧ ಹೋರಾಟದಲ್ಲೂ ಉಭಯ ಪಕ್ಷಗಳು ಸೇರಿಯೇ ಹೋರಾಟಕ್ಕೆ ಇಳಿಯಬೇಕು. ಈ ವಿಷಯವಾಗಿ ಉಭಯ ಪಕ್ಷಗಳ ರಾಜ್ಯಾಧ್ಯಕ್ಷರು ಸಭೆ ನಡೆಸಬೇಕು ಎಂಬ ಒಕ್ಕೊರಲಿನ ಒತ್ತಾಯವನ್ನು ಇತ್ತೀಚಿಗೆ ಜೆಡಿಎಸ್ ಮುಖಂಡರು ಆ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.
ಆದರೆ ಬಿಜೆಪಿ ಈ ಭಾಗದಲ್ಲಿ ಸದೃಢವಾಗಿದೆ. ಅದರ ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ. ಕೆಲವೊಂದಿಷ್ಟು ಸ್ಥಾನ ಬಿಟ್ಟುಕೊಟ್ಟರೆ ಆ ಭಾಗದಲ್ಲಿ ಪಕ್ಷದ ಮುಖಂಡರು ಸಿಟ್ಟಿಗೇಳಬಹುದು ಎಂಬ ಯೋಚನೆ ಬಿಜೆಪಿಯದ್ದು. ಹೀಗಾಗಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸೀಟ್ ಹಂಚಿಕೆ ವೇಳೆ ಮೈತ್ರಿ ಯಾವ ರೀತಿ ಮಾಡಿಕೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿದೆ.
ಒಟ್ಟಿನಲ್ಲಿ ಲೋಕಸಭೆಯಲ್ಲಿನ ಮೈತ್ರಿ ಇನ್ಮುಂದೆ ಎಲ್ಲ ಚುನಾವಣೆಗಳಲ್ಲೂ ಮುಂದುವರಿಯುತ್ತದೆಯೋ ಹೇಗೆ ಎಂಬುದನ್ನು ಕಾಯ್ದು ನೋಡಬೇಕಿದೆ.ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದ ಎರಡು ಪಕ್ಷಕ್ಕೆ ಲಾಭವಾಗಿರುವುದು ನಿಜ. ಸ್ಥಳೀಯ ಸಂಸ್ಥೆ ಸೇರಿದಂತೆ ಇನ್ನುಳಿದ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಈ ಭಾಗದಲ್ಲಿ ನಮಗೆ ಅಷ್ಟೊಂದು ಶಕ್ತಿಯಿಲ್ಲ ನಿಜ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ ಕನಿಷ್ಠವೆಂದರೂ 5-6 ಸಾವಿರ ಮತ ಪಡೆದಿದ್ದೇವೆ. ಅವೆಲ್ಲವೂ ಇದೀಗ ಬಿಜೆಪಿಗೆ ಬಿದ್ದಿವೆ. ಮೈತ್ರಿಯಿಂದ ಎರಡು ಪಕ್ಷಕ್ಕೂ ಲಾಭ. ಇದು ಹೀಗೆ ಮುಂದುವರಿಯಬೇಕು ಎಂದು ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಹೇಳಿದರು.