ತುಮಕೂರು ವ್ಯಕ್ತಿ ದರೋಡೆ ಪ್ರಕರಣ: 6 ಆರೋಪಿಗಳ ಬಂಧಿಸಿದ ಪೊಲೀಸರು

| Published : Jun 11 2024, 01:39 AM IST

ಸಾರಾಂಶ

ರೈಸ್ ಮಿಲ್ ಕೆಲಸ ಹುಡುಕಿಕೊಂಡು ಬಂದಿದ್ದ ತುಮಕೂರು ಜಿಲ್ಲೆ ಮೂಲದ ವ್ಯಕ್ತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ 6 ಆರೋಪಿಗಳನ್ನು ಬಂಧಿಸಿ, ಎರಡು ಬೈಕ್‌, ಮೊಬೈಲ್ ಸೇರಿದಂತೆ ₹1.30 ಲಕ್ಷ ಮೊತ್ತದ ಸ್ವತ್ತನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

- ರೈಸ್ ಮಿಲ್ ಕೆಲಸ ಅರಸಿ ದಾವಣಗೆರೆಗೆ ಬಂದಿದ್ದ ಬಿಪಿನ್‌ ಕುಮಾರ

- ಆರೋಪಿಗಳಿಂದ ಮೊಬೈಲ್, ವಾಹನ ಜಪ್ತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರೈಸ್ ಮಿಲ್ ಕೆಲಸ ಹುಡುಕಿಕೊಂಡು ಬಂದಿದ್ದ ತುಮಕೂರು ಜಿಲ್ಲೆ ಮೂಲದ ವ್ಯಕ್ತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ 6 ಆರೋಪಿಗಳನ್ನು ಬಂಧಿಸಿ, ಎರಡು ಬೈಕ್‌, ಮೊಬೈಲ್ ಸೇರಿದಂತೆ ₹1.30 ಲಕ್ಷ ಮೊತ್ತದ ಸ್ವತ್ತನ್ನು ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಅಶೋಕ ನಗರ 3ನೇ ಕ್ರಾಸ್ ವಾಸಿ, ತರಗಾರ ಕೆಲಸಗಾರ ಎಂ.ಬೀರೇಶ ಅಲಿಯಾಸ್ ಬೀರ (26), ವಿನಾಯಕ ಅಲಿಯಾಸ್‌ ವಿನ್ನಿ ಅಲಿಯಾಸ್‌ ಗಿರಿ (24), ವಿನೋಬ ನಗರ 3ನೇ ಮೇನ್ 1ನೇ ಕ್ರಾಸ್‌ ವಾಸಿ, ಎಲೆಕ್ಟ್ರಿಷಿಯನ್‌ ಅರುಣ (23), 8ನೇ ಕ್ರಾಸ್ ವಾಸಿ, ಎಲೆಕ್ಟ್ರಿಷಿಯನ್‌ ಕಾರ್ತಿಕ್ (19), 14ನೇ ಕ್ರಾಸ್ ವಾಸಿ ತರುಣ್ (20) ಹಾಗೂ 8ನೇ ಕ್ರಾಸ್‌ ವಾಸಿ, ಚಿನ್ನಾಭರಣ ಕೆಲಸಗಾರ ಮದನ್ (21) ಬಂಧಿತ ಆರೋಪಿಗಳು.

ತುಮಕೂರು ಜಿಲ್ಲೆ ಕೋರ ಹೋಬಳಿಯ ಬೆಳವರ ಗ್ರಾಮದ ಬಿಪಿನ್ ಕುಮಾರ ತಂದೆ ಬಲಿಷ್ಟ ಕುಮಾರ (30) ರೈಸ್ ಮಿಲ್‌ನಲ್ಲಿ ಕೆಲಸ ಅರಸಿಕೊಂಡು ದಾವಣಗೆರೆಗೆ ಜೂ.5ರಂದು ಬಂದಿದ್ದರು. ಅಂದು ಬೆಳಗ್ಗೆ 10 ಗಂಟೆ ವೇಳೆಗೆ ರಾಷ್ಟ್ರೀಯ ಹೆದ್ದಾರಿಯ ಪೆಟ್ಟಿಗೆ ಅಂಗಡಿಯಲ್ಲಿ ಟೀ ಕುಡಿದು, ಅಂಡರ್ ಬ್ರಿಡ್ಜ್ ಬಳಿ ಹೋಗುತ್ತಿದ್ದರು. ಆಗ ಇಬ್ಬರು ಅಪರಿಚಿತರು ಮಾತನಾಡಿಸಿ, ಬೈಕ್‌ನಲ್ಲಿ ಹತ್ತಿಸಿಕೊಂಡು ಭದ್ರಾ ಕಾಲುವೆ ಬಳಿ ಕರೆದೊಯ್ದಿದ್ದಾರೆ. ಬಳಿಕ ಬಿಪಿನ್ ಕುಮಾರ ಬಳಿ ಇದ್ದ ₹20 ಸಾವಿರ ಮೌಲ್ಯದ ಸ್ಯಾಂಮ್‌ ಸಂಗ್‌ ಎ 15 ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಗೆ ಬಿಪಿನ್ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ₹20 ಸಾವಿರ ಮೌಲ್ಯದ ಮೊಬೈಲ್‌, ₹50 ಸಾವಿರ ಮೌಲ್ಯದ ಹೊಂಡಾ ಶೈನ್ ಬೈಕ್‌, ₹60 ಸಾವಿರ ಮೌಲ್ಯದ ಮತ್ತೊಂದು ವಾಹನ ಜಪ್ತಿ ಮಾಡಿದ್ದಾರೆ. ಬಂಧಿತರ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಎಸ್‌ಪಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ:

ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಇನ್‌ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ನೇತೃತ್ವದ ತಂಡವು ಆರೋಪಿಗಳನ್ನು ಪತ್ತೆ ಮಾಡಿ, ಬಂಧಿಸಿದೆ. ಪಿಎಸ್ಐಗಳಾದ ಜಿ.ಎನ್.ಮಂಜುನಾಥ, ಎಂ.ಎಸ್.ಹೊಸಮನಿ, ಸಿಬ್ಬಂದಿ ಎಂ.ಆನಂದ, ಭೋಜಪ್ಪ ಕಿಚಡಿ, ಟಿ.ಮಂಜಪ್ಪ, ಯೋಗೀಶ ನಾಯ್ಕ, ಗೋಪಿನಾಥ ಬಿ.ನಾಯ್ಕ, ಆರ್.ಲಕ್ಷ್ಮಣ, ಎಸ್‌ಪಿ ಕಚೇರಿ ಸಿಬ್ಬಂದಿ ರಾಘವೇಂದ್ರ, ಶಾಂತರಾಜ, ಕಮಾಂಡ್ ಸೆಂಟರ್ ಸಿಬ್ಬಂದಿ ಮಾರುತಿ, ಸೋಮಶೇಖರ ತಂಡ ಆರೋಪಿಗಳ ಪತ್ತೆಯಲ್ಲಿ ಶ್ರಮಿಸಿದೆ.