ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ಸಲಹೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸಿ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಆಸರೆಯಾಗಿದೆ. ಸಂಘದಿಂದ ಪಡೆದ ಸಾಲವನ್ನು ದುಂದು ವೆಚ್ಚಕ್ಕೆ ಬಳಸದೆ ಸ್ವ ಉದ್ಯೋಗ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಅಗತ್ಯಗಳಿಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಹೇಳಿದರು.

ತಾಲೂಕಿನ ದೇವಸಮುದ್ರ ಹುಚ್ಚು ಮಲ್ಲಪ್ಪನ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ವರ ಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿಯೇ ಮಗುವಿನ ಮೊದಲ ಗುರುವಾಗಿದ್ದು ಮಕ್ಕಳಲ್ಲಿ ಪ್ರಾಮಾಣಿಕತೆ, ಶಿಸ್ತು, ನ್ಯಾಯ-ನೀತಿ ಹಾಗೂ ಮೌಲ್ಯಾಧಾರಿತ ಬದುಕಿನ ಗುಣಗಳನ್ನು ಬೆಳೆಸಬೇಕು. ಆಡಂಬರದ ಬದುಕಿಗೆ ಹಣವನ್ನು ಖರ್ಚು ಮಾಡುವ ಬದಲು ಉಳಿತಾಯ ಮಾಡಿಕೊಂಡು ಸ್ವಯಂ ಉದ್ಯೋಗ ಮತ್ತು ಮಕ್ಕಳ ಶಿಕ್ಷಣಕ್ಕೆ ಸದ್ಭಳಕೆ ಮಾಡಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಸ್ಕಾಲರ್ ಶಿಪ್ ಮುಂಜೂರಾತಿಯಾದ ಮಕ್ಕಳಿಗೆ ಯೋಜನೆಯಿಂದ ಮುಂಜೂರಾತಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ವಿಜಯಲಕ್ಷ್ಮಿ, ರಾಂಪುರ ಮುದುಕೇಶ್ವರ ಮಠದ ಗುರು ಪ್ರಸಾದ್ ಸ್ವಾಮೀಜಿ, ಯೋಜನಾಧಿಕಾರಿ ರಾಘವೇಂದ್ರ ನಾಯ್ಕ, ಪೂಜಾ ಸಮಿತಿ ಅಧ್ಯಕ್ಷ ಜಡೇರು ನಾಗರಾಜು, ಕೃಷಿ ಮೇಲ್ವಿಚಾರಕ ಬೋರಯ್ಯ, ವಲಯ ಮೇಲ್ವಿಚಾರಕಿ ಶೀಲಾ ಇದ್ದರು.