ಪ್ರತಿಯೊಬ್ಬರೂ ಗಿಡ-ಮರ ಬೆಳೆಸಿ ರಕ್ಷಿಸಿ: ಸೋಮಶೇಖರಗೌಡ

| Published : Jun 06 2024, 12:32 AM IST

ಸಾರಾಂಶ

ಮಲ್ಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 10 ಸಾವಿರ ಸಸಿಗಳ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ರಕ್ಷಣೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಹೇಳಿದರು.

ತಾಲೂಕಿನ ಮಲ್ಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 10 ಸಾವಿರ ಸಸಿಗಳ ವಿತರಣೆ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಪರಿಸರ ಮನುಷ್ಯನನ್ನು ಕಾಪಾಡುತ್ತದೆ. ಆದ್ದರಿಂದ ಅದರ ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.

ವಲಯ ಅರಣ್ಯ ಅಧಿಕಾರಿ ರುದ್ರಮುನಿ ಮಾತನಾಡಿದರು. ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಮುಖಂಡ ಬಸವರಾಜ ನಿಟ್ಟೂರ್ ಗುತ್ತೇದಾರ, ಸದಸ್ಯರಾದ ಶಂಕರಗೌಡ ಎಲೆಕೂಡ್ಲಿಗಿ, ಗಿರಿಸ್ವಾಮಿ ಹೆಡಿಗಿನಾಳ, ಮಂಜುನಾಥ ಗಾಣಗೇರ, ಚನ್ನಬಸಯ್ಯ ಸ್ವಾಮಿ ಹಿರೇಮಠ, ಚನ್ನಪ್ಪ ಕೆ.ಹೊಸಹಳ್ಳಿ, ಅರಣ್ಯ ಇಲಾಖೆಯ ಅಧಿಕಾರಿ ಮಲ್ಲಿಕಾ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಆದೇಶ ತಿಡಿಗೋಳ ಇದ್ದರು.

ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳುಗಳೊಂದಿಗೆ ಪರಿಸರ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು. ಮಲ್ಲಾಪೂರ ಸರ್ಕಾರಿ ಶಾಲೆಯಲ್ಲಿ 300 ಸಸಿಗಳನ್ನು ನೆಡಲಾಯಿತು. ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಹಸಿರೀಕರಣಗೊಳಿಸಲು 10 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

ದುಗ್ಗಮ್ಮನಗುಂಡ: ತಾಲೂಕಿನ ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮತ್ತು ಚಿಕ್ಕಯ್ಯ ಪಂಡಿತ್ ಘಟಕದಿಂದ ಬುಧವಾರ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಮುಖ್ಯಶಿಕ್ಷಕ ಶಂಕರದೇವರು ಹಿರೇಮಠ ಮಾತನಾಡಿದರು. ಅಂಗನವಾಡಿ ಶಿಕ್ಷಕಿ ಭಾಗ್ಯಮ್ಮ, ಮುಖ್ಯ ಅಡುಗೆದಾರರಾದ ರೇಣುಕಮ್ಮ ಹಾಗೂ ಗ್ರಾಮಸ್ಥರು ಇದ್ದರು.

ಸುಕಾಲಪೇಟೆ ಶಾಲೆ: ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣ ಪ್ರಯುಕ್ತ ಶಾಲಾವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಸಿಆರ್ಪಿ ಹನುಮಂತಪ್ಪ, ಮುಖ್ಯಶಿಕ್ಷಕ ಗುರುಬಸಯ್ಯ ಹಾಗೂ ಶಿಕ್ಷಕರು ಇದ್ದರು.

ಮಹಿಳಾ ಕಾಲೇಜು: ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿನಿಯರು ಆವರಣದಲ್ಲಿ ಹಲವು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವಂತೆ ಸಂದೇಶ ಸಾರಿದರು. ಪ್ರಾಂಶುಪಾಲೆ ಡಾ.ಲಕ್ಷ್ಮಿದೇವಿ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗ ಭಾಗಹಿಸಿದ್ದರು.

ವಿಜಯ ಪಬ್ಲಿಕ್ ಸ್ಕೂಲ್: ಸ್ಥಳೀಯ ಇಂದಿರಾ ನಗರದಲ್ಲಿರುವ ವಿಜಯ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು. ಸಂಸ್ಥೆಯ ಅಧ್ಯಕ್ಷ ಹನುಮೇಶ ತಿಡಿಗೋಳ, ಉಪನ್ಯಾಸಕ ಬಸವರಾಜ ಬಳಿಗಾರ ಹಾಗೂ ಸಿಬ್ಬಂದಿ ಇದ್ದರು.