ಸಾರಾಂಶ
ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗಾಗಿ ಪ್ರತಿಯೊಬ್ಬರೂ ಮನೆಯ ಪರಿಸರದ ಜತೆಗೆ ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ ಆವರಣ, ಶಾಲೆ ಆವರಣ ಕಡೆಗೂ ಗಮನ ಹರಿಸಬೇಕು.
ಶಿರಹಟ್ಟಿ: ಪ್ರತಿಯೊಬ್ಬರೂ ತಮ್ಮ ಮನೆಯ ಮತ್ತು ಊರಿನ ನೈರ್ಮಲ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಸ್ವಚ್ಛತೆ ಇದ್ದೆಡೆ ಆರೋಗ್ಯ, ಅಕ್ಷರ ಹಾಗೂ ಉತ್ತಮ ಸಮಾಜ ಕಾಣಲು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ತಿಳಿಸಿದರು.ಪಟ್ಟಣ ಪಂಚಾಯಿತಿ ಶಿರಹಟ್ಟಿ, ಘಟಕ ವ್ಯವಸ್ಥಾಪಕರು, ಸಂಚಾರಿ ಮೇಲ್ವಿಚಾರಕರು ಹಾಗೂ ಸಮಸ್ತ ಸಿಬ್ಬಂದಿ ವರ್ಗ ರಾಜ್ಯ ರಸ್ತೆ ಸಾರಿಗೆ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಬಸ್ ನಿಲ್ದಾಣದ ಆವರಣ ಸ್ವಚ್ಛಗೊಳಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಕನಸು ನನಸಾಗಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ರಾಷ್ಟ್ರೀಯ ಸ್ವಚ್ಛತಾ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಲಿದೆ ಎಂದರು.ಸ್ವಚ್ಛತೆ ದೈನಂದಿನ ಜೀವನದಲ್ಲಿ ಅಗತ್ಯ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಹಲವಾರು ರೋಗಗಳಿಗೆ ಪರಿಸರ ಸ್ವಚ್ಛವಾಗಿ ಇಲ್ಲದಿರುವುದೇ ಕಾರಣ. ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗಾಗಿ ಪ್ರತಿಯೊಬ್ಬರೂ ಮನೆಯ ಪರಿಸರದ ಜತೆಗೆ ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ ಆವರಣ, ಶಾಲೆ ಆವರಣ ಕಡೆಗೂ ಗಮನ ಹರಿಸಬೇಕು ಎಂದರು.ಗಾಂಧೀಜಿಯವರ ಸತ್ಯ, ಅಹಿಂಸೆ, ಶಾಂತಿ ತತ್ವಾದರ್ಶಗಳು ಬರಡಾದ ಬದುಕಿಗೆ ಬೆಳಕಾಗುತ್ತವೆ. ದೇಶಕ್ಕೆ ಸಮರ್ಪಣಾ ಮನೋಭಾವದ ಸೇವೆಗೈದಲ್ಲಿ ಜೀವನದ ಸಾರ್ಥಕತೆಯಾಗುತ್ತದೆ. ಗಾಂಧೀಜಿಯಂಥ ಸಾಕಾರ ಮೂರ್ತಿಗಳು ದೇಶಕ್ಕೆ ಅವಶ್ಯ. ಅಂತಹ ಗುಣಗಳನ್ನು ಬೆಳೆಸಿಕೊಂಡು ದೇಶದ ಅಭ್ಯುದಯಕ್ಕೆ ಸಮರ್ಪಿಸಿಕೊಳ್ಳಬೇಕು. ಅವರ ಸರಳ ಜೀವನ ಶೈಲಿ, ಉದಾತ್ತ ವಿಚಾರಧಾರೆಗಳು ಎಲ್ಲರಲ್ಲೂ ಬರಲಿ. ಸ್ವಚ್ಛ ಭಾರತದ ಬಗ್ಗೆ ಅವರು ಕಂಡ ಕನಸು ನನಸಾಗಿಸಬೇಕು ಎಂದರು.ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ತೋರುವ ಆಸಕ್ತಿಯನ್ನು ನಮ್ಮ ಸುತ್ತಲಿನ ಪರಿಸರದ ಬಗ್ಗೆಯೂ ತೋರಿದರೆ ಸ್ವಚ್ಛ ಭಾರತದ ಕನಸು ಶೀಘ್ರವಾಗಿ ನನಸಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಅಸಮತೋಲನ ಹೆಚ್ಚಾಗಿ ಅನೇಕ ಕಷ್ಟಗಳಿಗೆ ತುತ್ತಾಗುತ್ತಿದ್ದೇವೆ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿದೆ ಎಂದರು.ಮಹಾತ್ಮ ಗಾಂಧೀಜಿಯವರು ಮರೆಯಲಾಗದ ಮಹಾನ್ ವ್ಯಕ್ತಿ. ಅಹಿಂಸಾವಾದಿ, ಸತ್ಯಪ್ರೇಮಿ ಈ ತತ್ವ ಸಿದ್ಧಾಂತಗಳು ಸದಾಕಾಲಕ್ಕೂ ಹೃದಯ ಮನಸ್ಸನ್ನು ತಟ್ಟುತ್ತದೆ. ಅಹಿಂಸಾ ಮಾರ್ಗ, ಸತ್ಯಾಗ್ರಹದಿಂದಲೇ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಮಹಾನ್ ಮಾನವತಾವಾದಿ ಎಂದರು.ಹಿಂದಿನ ಕಾಲದಲ್ಲಿ ಗ್ರಾಮದ, ಊರಿನ ಎಲ್ಲ ರಸ್ತೆ, ಚರಂಡಿಗಳನ್ನು ಜನರೇ ಶ್ರಮದಾಮದ ಮೂಲಕ ಸ್ವಚ್ಛಗೊಳಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜನರಿಗೆ ಸ್ವಚ್ಛತೆಯ ಪ್ರಜ್ಞೆ ಇಲ್ಲದಾಗಿದೆ. ಗಾಂಧೀಜಿಯ ತತ್ವಗಳಲ್ಲಿ ಶ್ರಮದಾನ ಮತ್ತು ಸ್ವಚ್ಛತೆಗೆ ಹೆಚ್ಚಿನ ಮಹತ್ವವಿದ್ದು, ಸ್ವಯಂಪ್ರೇರಿತರಾಗಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಲಹೆ ನೀಡಿದರು. ಗಾಂಧೀಜಿಯವರ ಆದರ್ಶ ಎಲ್ಲ ಕಾಲದಲ್ಲೂ ಮಹತ್ವ ಪಡೆದುಕೊಳ್ಳುತ್ತವೆ. ಗಾಂಧೀಜಿಯವರ ಅನೇಕ ಮೌಲ್ಯಗಳು ನಮ್ಮ ಮುಂದೆ ಇವೆ. ಅವರ ಸಿದ್ಧಾಂತಗಳನ್ನು ಪಾಲಿಸಬೇಕು. ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಎಂಥ ಜಟಿಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂಬುದನ್ನು ವಿಶ್ವಕ್ಕೆ ಮನನ ಮಾಡಿಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧೀಜಿ ಅವರು ಪ್ರಪಂಚದ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದರು.ಸಿದ್ದಪ್ಪ ಅಮರಾಪೂರ, ಗುರುನಾಥ ಪಾತಾಳೆ, ಜಿ.ಟಿ. ಜಾಲಿಕಟ್ಟಿ, ಸೌಮ್ಯ ಚವ್ಹಾಣ, ಪುಟ್ಟು ಮಣ್ಣೂರ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ಇದ್ದರು.