ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್‌ರ ಭೀಮೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ. ವಿ. ಗೋಪಾಲಗೌಡ
ಕನ್ನಡಪ್ರಭ ವಾರ್ತೆ ಚಿಂತಾಮಣಿನಗರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್‌ರ ಭೀಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಶ್ರೀನಿವಾಸಪುರ ರಸ್ತೆಯಲ್ಲಿರುವ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ವಿ. ಗೋಪಾಲಗೌಡ ಸಮಾಜದಲ್ಲಿ ಸಮಪಾಲು ಸಮಬಾಳು ಸಿಗಬೇಕಾದರೆ ಪ್ರತಿಯೊಬ್ಬರೂ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕೆಂದು ಕರೆ ನೀಡಿದರು.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಶಕ್ತಿಯಿಂದಾಗಿ ಇಂದು ಶೋಷಿತ ವರ್ಗಗಳಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸದೃಢತೆ ಲಭಿಸಿದೆ. ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಕೇವಲ ಮನೆಯಲ್ಲಿ ಕುಳಿತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಿರಂತರ ಹೋರಾಟದ ಅಗತ್ಯವಿದೆ. ದಲಿತ ಮತ್ತು ಹಿಂದುಳಿದ ವರ್ಗಗಳ ಜನರು ಬೇರೆಯವರ ಕೈಗೊಂಬೆಗಳಾಗಬಾರದು ಎಂದರು.
ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಂಡು ಅನ್ಯಾಯ ಮಾಡುವ ಸಾಧ್ಯತೆ ಇರುತ್ತದೆ. ಈ ದೇಶದಲ್ಲಿ ದಲಿತರು ಶೇಕಡಾ 20 ರಷ್ಟಿದ್ದಾರೆ.ಇವರ ಜೊತೆಗೆ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಸೇರಿದರೆ ಒಟ್ಟು ಜನಸಂಖ್ಯೆಯ ಶೇಕಡಾ 70ಕ್ಕಿಂತ ಹೆಚ್ಚಾಗುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಹೊಂದಿರುವವರೇ ಸರ್ಕಾರ ರಚಿಸುವ ಶಕ್ತಿ ಹೊಂದಿರುತ್ತಾರೆ ಎಂದು ಜಾಗೃತಿ ಮೂಡಿಸಿದರು.
ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಮಾತನಾಡಿ, ಮಿಸ್ಟರ್ ಸುಧಾಕರ್ ಅವರೇ, ಈ ಕುಚೇಷ್ಟೆಯ ತಂತ್ರ, ಕುತಂತ್ರಗಳು ಮತ್ತು ವಿಕೃತ ಮನಸ್ಸು ಜೆ.ಕೆ. ಕೃಷ್ಣಾರೆಡ್ಡಿರ ಜಾಯಮಾನವಲ್ಲ. ಇವೆಲ್ಲವೂ ನಿಮ್ಮ ಕುಟುಂಬಕ್ಕೆ ರಕ್ತಗತವಾಗಿ ಬಂದಿರುವಂತಹವು. 2013 ರಿಂದ 2023 ರವರೆಗೆ ಈ ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ. ನನಗೆ ಯಾವುದೇ ಕುತಂತ್ರದ ರಾಜಕಾರಣ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರ ಭಾಗದ ಸುಮಾರು 1 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು ಭಕ್ತರಹಳ್ಳಿ ಅರಸೀಕೆರೆ ಕೆರೆಯಿಂದ ನೀರು ತರುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಿದ್ದೆವು. ಆದರೆ ವಿರೋಧಿಗಳು ಅಲ್ಲಿನ ಕೆಲವು ಮುಖಂಡರನ್ನು ಎತ್ತಿಕಟ್ಟಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಹೈಕೋರ್ಟ್ ಅವರಿಗೆ ಛೀಮಾರಿ ಹಾಕಿ, ಆ ದಾವೆಯನ್ನು ವಜಾಗೊಳಿಸಿತೆಂದು ಕಿಡಿಕಾರಿದರು.2004 ರಿಂದ 2013 ರವರೆಗೆ ನೀವು ಶಾಸಕರಾಗಿದ್ದಾಗ ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ನಿಮಗೆ ಯೋಗ್ಯತೆ ಇರಲಿಲ್ಲವೇ? ಅಂಬೇಡ್ಕರ್ ಭವನ ಎಂದರೆ ಊರಿನಿಂದ ಹೊರಗಿರಬೇಕು ಎನ್ನುವ ವಿಕೃತ ಮನಸ್ಸು ನಿಮ್ಮದಾಗಿತ್ತೆಂದು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಭೀಮಪುತ್ರರು, ಭೀಮಪುತ್ರಿಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ದಲಿತ ಮುಖಂಡರು ಇದ್ದರು.ಚಿತ್ರಶೀರ್ಷಿಕೆ: 1 ಪೂರ್ಣಕುಂಭ ಮೇಳದೊಂದಿಗೆ ಸಾಗಿಬಂದ ಮಹಿಳೆಯರು ಮತ್ತು ಸ್ತಬ್ಧಚಿತ್ರಗಳು.
ಚಿತ್ರಶೀರ್ಷಿಕೆ: 2 ವೇದಿಕೆಯಲ್ಲಿ ಗಣ್ಯರು ದೀಪ ಬೆಳಗುತ್ತಿರುವ ಚಿತ್ರಚಿತ್ರಶೀರ್ಷಿಕೆ: 3 ಜೆ ಕೆ ಕೃಷ್ಣಾರೆಡ್ಡಿರವರು ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಮಾತನಾಡುತ್ತಿರುವ ಚಿತ್ರ.