ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತದ ಸಂವಿಧಾನ ಸರ್ವ ಶ್ರೇಷ್ಠ ಮತ್ತು ಸರ್ವೋಚ್ಛವಾಗಿದೆ. ದೇಶದ ಪ್ರತಿಯೊಬ್ಬರೂ ಸಂವಿಧಾನವನ್ನು ಓದುವ ಮತ್ತು ಅರ್ಥೈಸಿಕೊಳ್ಳುವ ಜೊತೆಗೆ ಸಂವಿಧಾನದ ಮೂಲ ಕರ್ತವ್ಯ ಅಳವಡಿಸಿಕೊಂಡು ಬದುಕಬೇಕಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದ ಬನ್ನೂರು ರಸ್ತೆಯ ಪೊಲೀಸ್ ಕಾವಾಯಿತು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಶ್ರದ್ಧೆ ಮತ್ತು ಪರಿಶ್ರಮದಿಂದ ದೇಶಕ್ಕೆ ಅಮೂಲ್ಯ ಸಂವಿಧಾನ ರಚಿಸಿಕೊಟ್ಟರು. ವಿಶ್ವದಲ್ಲಿಯೇ ಅತಿದೊಡ್ಡ ಸಂವಿಧಾನ ಜಾರಿಗೊಳಿಸಿದ ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಭಾರತೀಯರಾಗಿ ನಾವೆಲ್ಲರೂ ಹೆಮ್ಮೆಯಿಂದ ಆಚರಿಸುತ್ತೇವೆ ಎಂದರು.ಸಂವಿಧಾನ ಜಾರಿಗೆ ಬಂದ ಮೇಲೆ ಪ್ರತಿಯೊಬ್ಬರಿಗೂ ಮೂಲ ಹಕ್ಕುಗಳು ದೊರೆತಿವೆ. ಸತಂತ್ರ್ಯರಾಗಿ ಹಾಗೂ ಸಮಾನರಾಗಿ ಸಮಾಜದಲ್ಲಿ ಜೀವಿಸಲು ಅವಕಾಶ ಸಿಕ್ಕಿದೆ. ಭಾರತ ಸ್ವತಂತ್ರವಾದ ಸಾರ್ವಭೌಮ ರಾಷ್ಟ್ರ. ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕವಾದ ಗಣರಾಜ್ಯವಾಗಿದೆ. ದೇಶ ಎಲ್ಲ ಪ್ರಜೆಗಳಿಗೂ ಸಾಮಾಜಿಕ, ಅರ್ಥಿಕ ನ್ಯಾಯ ಸಿಗಬೇಕಾಗಿದೆ ಎಂದರು.
ಭಾರತೀಯರಾದ ನಾವೆಲ್ಲರೂ ಸಂವಿಧಾನದ ಮಹತ್ವ ಅರಿತುಕೊಳ್ಳಬೇಕಿದೆ. ಸಂವಿಧಾನದ ಮಹತ್ವ ಮತ್ತು ಅದರ ಪ್ರಾಮುಖ್ಯತೆ ತಿಳಿಸುವ ಕುರಿತು ಸರ್ಕಾರ ಸಂವಿಧಾನ ಜಾಗೃತಿ ಜಾಥಾಗೆ ಗಣರಾಜ್ಯ ದಿನದಂದೇ ರಾಜ್ಯಾದ್ಯಂತ ಚಾಲನೆ ನೀಡುತ್ತಿದೆ ಎಂದರು.ಮಂಡ್ಯ ಜಿಲ್ಲೆಯಲ್ಲಿಯೂ ಸಹ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಲಾಗುವುದು. ಇಂದಿನಿಂದ ಫೆಬ್ರವರಿ 23 ರವರೆಗೆ ಜಿಲ್ಲೆಯ 233 ಗ್ರಾಪಂಗಳಲ್ಲಿಯೂ ರಥ ಸಂಚರಿಸಲಿದೆ ಎಂದರು.
ರಾಜ್ಯ ಸರ್ಕಾರ ಸಂವಿಧಾನ ಮೂಲ ಧ್ಯೇಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಜನ ಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಕನಿಷ್ಠ ಅವಶ್ಯಕತೆ ಪೂರೈಸುವ ಆಶಯ ಹೊಂದಿದೆ. ಅರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣಕ್ಕಾಗಿ ಅನೇಕ ಜನಪರ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ 5 ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.ಶಕ್ತಿ ಯೋಜನೆ ಜಾರಿಯಾದ ನಂತರ 2023ರ ಡಿಸೆಂಬರ್ ಅಂತ್ಯಕ್ಕೆ ಒಟ್ಟು 3.58 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆ ಸದುಪಯೋಗ ಪಡಿಸಿಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಅಕ್ಕಿಯನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಒಟ್ಟು 4,36,510 ಫಲಾನುಭವಿಗಳಿಗೆ 137.50 ಕೋಟಿ ರು.ಹಣವನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ 4,64,303 ಗ್ರಾಹಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಡಿಸೆಂಬರ್-2023ರ ಅಂತ್ಯಕ್ಕೆ 8.90 ಕೋಟಿ ಯೂನಿಟ್ಸ್ ವಿದ್ಯುತ್‌ನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ 76.22 ಕೋಟಿ ರು. ಗಳನ್ನು ಪಾವತಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 4,35,820 ಮಹಿಳೆಯರಿಗೆ ತಲಾ ರು. 2,000/-ಗಳಂತೆ ಒಟ್ಟು 89.17 ಕೋಟಿ ಪಾವತಿಸಲಾಗಿದೆ ಎಂದರು.ಯುವನಿಧಿ ಯೋಜನೆಯಡಿ 2023ನೇ ಸಾಲಿನಲ್ಲಿ ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಸಿಗದ ಡಿಪ್ಲೊಮಾ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕ್ರಮವಾಗಿ 1,500- ಮತ್ತು 3,000ಗಳನ್ನು ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳ ಅವಧಿಯವರೆಗೆ ನೀಡಲಾಗುವುದು. ಜಿಲ್ಲೆಯಲ್ಲಿ ಈವರೆಗೆ 2,053 ಅರ್ಜಿಗಳು ನೋಂದಣಿಯಾಗಿರುತ್ತವೆ ಎಂದು ಮಾಹಿತಿ ನೀಡಿದರು.