ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರು
ಪ್ರತಿಯೊಬ್ಬರು ಆಹಾರ ಪರವಾನಗಿ ನೋಂದಣಿ ಮಾಡಿಕೊಂಡು ನಂತರ ಉದ್ಯಮ ನಡೆಸಬೇಕು ಎಂದು ಜಿಲ್ಲಾ ಆಹಾರ ಅಧಿಕಾರಿ ಡಾ. ಕಾಂತರಾಜು ತಿಳಿಸಿದರು.ಪಟ್ಟಣದ ಪುರಸಭಾ ಆವರಣದಲ್ಲಿರುವ ಸಿಡಿಎಸ್ ಭವನದಲ್ಲಿ ಸೋಮವಾರ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಮತ್ತು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರದ ಸಹಭಾಗಿತ್ವದಲ್ಲಿ ಆಹಾರ ಉದ್ಯಮಿಗಳಿಗೆ ಪರವಾನಗಿ ನೋಂದಣಿ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇರಿದ್ದ ಎಲ್ಲಾ ವರ್ತಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದು ಆಹಾರ ಕಲಬೆರಕೆ ಪ್ರಮಾಣದ ಅಧಿಕವಾಗುತ್ತಿದ್ದು, ಜನರಿಗೆ ಕಲಬೆರಕೆ ಆಹಾರದಿಂದ ಹಲವಾರು ಮಾರಣಾಂತಿಕ ಕಾಯಿಲೆಗೆ ಮನುಷ್ಯ ತುತ್ತಾಗುತ್ತಿದ್ದು, ಇಂತಹ ಪ್ರಮಾಣವನ್ನು ಕುಗ್ಗಿಸುವ ನಿಟ್ಟಿನಲ್ಲಿ ಆಹಾರ ಉದ್ಯಮಿಗಳಿಗೆ ಪರವಾನಗಿ ನೋಂದಣಿ ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ದಂಡ ಮತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು.ಕಳೆದ ವಾರ ಸ್ಥಳಿಯ ಪ್ರದೇಶದಿಂದ ಕೇರಳಕ್ಕೆ ಹೋದಂತ ಬೆಲ್ಲ ತಿರಸ್ಕೃತವಾಗಿದ್ದು, ಅದರ ಮೂಲ ನೋಡಿದಾಗ ಅದು ತಯಾರಾಗುತ್ತಿದ್ದ ಪ್ರದೇಶ ಮತ್ತು ಆಹಾರ ಇನ್ನಲು ಯೋಗ್ಯವಾಗಿಲ್ಲ ಎಂದು ತಿಳಿದು ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಎಲ್ಲಾ ವ್ಯಾಪಾರಸ್ಥರು ಕಡ್ಡಾಯವಾಗಿ ಪರವಾನಗಿ ಪಡೆದುಕೊಂಡು, ಇಲಾಖಾ ಅಧಿಕಾರಿಗಳಿಗೆ ಸಹಕಾರಿ ನೀಡಿ, ಅವರು ನಿಮ್ಮ ಸ್ಥಳಕ್ಕ ಬಂದಾಗ ಅವರು ಕೇಳಿದಂತ ದಾಖಲೆಯನ್ನು ನೀಡಿ, ನಿಗದಿಪಡಿಸಿದಂತ ದಿನದಲ್ಲಿ ಇಲಾಖಾ ವತಿಯಿಂದ ನೀಡಲಾಗುವಂತ ತರಬೇತಿಯಲ್ಲಿ ಭಾಗವಹಿಸಿ, ಪ್ರಮಾಣಪತ್ರ ಪಡೆಯಬೇಕು ಎಂದರು.ಜಿಲ್ಲಾ ಆಹಾರ ಸಂಸ್ಥೆಯ ಅಧಿಕಾರಿ ರಶ್ಮಿ ಮಾತನಾಡಿ, ಜನರಿಗೆ ನೀಡುವಂತ ಆಹಾರ ಕಲಬೆರಕೆ ವಸ್ತುಗಳನ್ನು ಹೊಂದಿದ್ದರೆ, ಅದು ಆರೋಗ್ಯಕ್ಕೆ ಹಾನಿಕಾರವಾಗಿದ್ದರೆ, 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಆಹಾರ ಸಂರಕ್ಷಕ ಅಧಿಕಾರಿ ಕಾರ್ಯದಲ್ಲಿ ತಡೆ ಒಡ್ಡಿದರೆ 3 ತಿಂಗಳ ಸೆರೆವಾಸ ಮತ್ತು 1 ಲಕ್ಷ ದಂಡ ನೀಡಬೇಕಾಗುತ್ತದೆ. ಜಪ್ತಿ ಮಾಡಿದಂತ ವಸ್ತುಗಳಿಗೆ ಹಾನಿ ಮಾಡಿದರೆ 6 ತಿಂಗಳ ಸೆರೆವಾಸ ಮತ್ತು 2 ಲಕ್ಷ ದಂಡ ನೀಡಬೇಕಾಗುತ್ತದೆ ಎಂದು ತಿಳಿಸಿದರು.ಅಪರಾಧಗಳಿ ಪುನರಾವರ್ತನೆಯಾದರೆ ಮುಂಚೆ ವಿಧಿಸಿದ ಶಿಕ್ಷೆ ಮತ್ತು ದಂಡದ ದುಪ್ಪಟ್ಟು ಇರುತ್ತದೆ. ಆಹಾರ ಸುರಕ್ಷತೆಯ ಕಾನೂನು ಅಡಿಯಲ್ಲಿ ಎಲ್ಲರು ಉತ್ತಮ ರೀತಿಯಲ್ಲಿ ಆಹಾರ ಪದಾರ್ಥವನ್ನು ನೀಡುವ ಮೂಲಕ ಸಹಕರಿಸಬೇಕಿದೆ ಎಂದರು.
ನಂತರ ರಾಜ್ಯ ಜೆಡಿಎಸ್ ಕಾರ್ಯದರ್ಶಿ ವೈ.ಎಸ್. ರಾಮಸ್ವಾಮಿ ಮಾತನಾಡಿ, ಇಂದು ಕಲಬೆರಕೆಗೆ ಕಾರಣವಾಗಿರುವಂತ ವಸ್ತುಗಳನ್ನು ತಯಾರಿಸುವಂತ ಮುಖ್ಯಸ್ಥನ ಮೇಲೆ ಕ್ರಮ ವಹಿಸುವಂತೆ ತಿಳಿಸಿದರು.ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತಿರುವಂತ ಮಾರಾಣಾಂತಿಕ ಬಣ್ಣ ಸೇರಿದಂತೆ ವಿವಿಧ ವಿಷ ಪದಾರ್ಥದ ಮೇಲೆ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, ಅದು ಬಳಕೆದಾರನ ಬಳಿಗೆ ಬರುವಂತ ಪರಿಸ್ಥಿತಿಗೆ ಬರುವುದಿಲ್ಲ ಎಂದರು.
ಪುರಸಭಾ ಮುಖ್ಯಾಧಿಕಾರಿ ಹೇಮಂತ್ ರಾಜ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ವೈ.ಎಸ್. ರಾಮಸ್ವಾಮಿ, ಯೋಜನಾಧಿಕಾರಿ ಕುಮಾರ್, ಜಿಲ್ಲಾ ಆಹಾರ ಅಧಿಕಾರಿ ಡಾ. ಕಾಂತರಾಜು, ಬೆಂಗಳೂರು ಆಹಾರ ಸಂಸ್ಥೆಯ ಅಧಿಕಾರಿ ರಾಘವೇಂದ್ರ ಶೆಟ್ಟಿ, ಜಿಲ್ಲಾ ಆಹಾರ ಸಂಸ್ಥೆಯ ಅಧಿಕಾರಿ ರಶ್ಮಿ, ತಾಲೂಕು ಆಹಾರ ಸಂಸ್ಥೆ ಅಧಿಕಾರಿ ಸುಮಂತ್, ಮುಖಂಡ ಸತೀಶ್ ನಾಯಕ್, ಕಂಬುನಾಯಕ್ ಮೊದಲಾದವರು ಇದ್ದರು.