ಕೋವಿಡ್ ಸಮಯದಲ್ಲಿ ಆಮ್ಲಜನಕಕ್ಕಾಗಿ ಪಟ್ಟ ಕಷ್ಟವನ್ನು ನೆನಪಿಸಿಕೊಂಡು ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸಲು ಸಂಕಲ್ಪ ಮಾಡಬೇಕು ಎಂದು ನಗರದ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ನಾವು ಮಕ್ಕಳಿಗಾಗಿ ಆಸ್ತಿ ಗಳಿಸುತ್ತೇವೆ. ಆದರೆ ಆ ಮಕ್ಕಳು ಆರೋಗ್ಯಕರವಾಗಿ ಬದುಕಬೇಕಾದ ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮುಂದಾಗುವುದಿಲ್ಲ. ಕೋವಿಡ್ ಸಮಯದಲ್ಲಿ ಆಮ್ಲಜನಕಕ್ಕಾಗಿ ಪಟ್ಟ ಕಷ್ಟವನ್ನು ನೆನಪಿಸಿಕೊಂಡು ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸಲು ಸಂಕಲ್ಪ ಮಾಡಬೇಕು ಎಂದು ನಗರದ ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.

ಇಲ್ಲಿನ ಟೈಮ್ಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಹಸಿರು ಸಿರಿ - ಸಸ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿ ಸಮತೋಲನದಲ್ಲಿ ಅಳಿಲಿನ ಮಹತ್ವವನ್ನು ವಿವರಿಸಿದ ಅವರು, ಅಳಿಲು ತಾನು ಬಚ್ಚಿಟ್ಟ ಬೀಜಗಳಲ್ಲಿ ಶೇ. ೩೦ರಷ್ಟನ್ನು ಮರೆತು ಬಿಡುತ್ತದೆ. ಆ ಬೀಜಗಳೇ ಇಂದು ಹೆಮ್ಮರಗಳಾಗಿ ಬೆಳೆದು ನಿಂತಿವೆ. ನಮ್ಮ ಸಂಸ್ಥೆಯ ೬ ರಿಂದ ೭ ಸಾವಿರ ವಿದ್ಯಾರ್ಥಿಗಳಿಗೆ ಸುಮಾರು ೧೦,೦೦೦ ಗಿಡಗಳನ್ನು ವಿತರಿಸಲಾಗಿದ್ದು, ಅವುಗಳನ್ನು ಒಂದು ವರ್ಷ ಪೋಷಿಸಿದವರಿಗೆ ಪ್ರಶಂಸನಾ ಪತ್ರ ನೀಡಲಾಗುತ್ತಿದೆ. ಈ ಎಲ್ಲ ಸಸಿಗಳು ಹೆಮ್ಮರವಾಗಿ ಬೆಳೆದು ಅದು ಪರಿಸರಕ್ಕೆ ನಾವು ಸಲ್ಲಿಸುವ ಬಹುದೊಡ್ಡ ಸೇವೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ, ಖ್ಯಾತ ವೈದ್ಯ ಡಾ. ರಘು ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ೩೦ ನಿಮಿಷಗಳ ಧ್ಯಾನ ಮಾಡುವುದರಿಂದ ಮಾನಸಿಕ ಶಾಂತಿ ಹಾಗೂ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ೧೪ ರಿಂದ ೨೪ ವರ್ಷದ ಯುವಜನತೆ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ಕಳವಳಕಾರಿ. ವಿದ್ಯಾರ್ಥಿಗಳು ಧ್ಯಾನದ ಮೊರೆಹೋಗಿ ದುಶ್ಚಟಗಳಿಂದ ದೂರವಿರಬೇಕು ಹಾಗೂ ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಕೆ. ಪ್ರಕಾಶ್, ಟೈಮ್ಸ್ ಸಂಸ್ಥೆಯ ಆಡಳಿತಾಧಿಕಾರಿ ಅನೂಪ್, ಪ್ರಾಂಶುಪಾಲ ಪ್ರದೀಪ್, ಉಪನ್ಯಾಸಕರಾದ ಯೋಗೀಶ್, ಕೃಷ್ಣಮೂರ್ತಿ, ಸಿಬ್ಬಂದಿ ವರ್ಗ, ಹಾರ್ಟ್ಫುಲ್‌ನೆಸ್ ಸಂಸ್ಥೆಯ ಪ್ರತಿನಿಧಿಗಳು, ರೋಟರಿ ಕ್ಲಬ್ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.