ಸಾರಾಂಶ
ಹಾನಗಲ್ಲ: ವಿಶ್ವದಲ್ಲೇ ಶ್ರೇಷ್ಠತೆ ಪಡೆದಿರುವ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಿದೆ. ಅದರಡಿ ಬದುಕು ಕಟ್ಟಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಪುಟ್ಟಪ್ಪ ಪರಮ್ಮನವರ ಹೇಳಿದರು.
ಹಾನಗಲ್ ತಾಲೂಕಿನ ವರ್ದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮೇಲು, ಕೀಳು, ಭೇದಭಾವ ಮಾಡದೇ ಎಲ್ಲರೂ ಸಮಾನರು ಎಂದು ಭಾವಿಸಿ ಜತೆಗೂಡಿ ಜೀವಿಸಬೇಕು. ಜತೆಗೆ ಸಂವಿಧಾನ ರಚನೆಗೆ ಶ್ರಮಿಸಿದವರನ್ನು ಮತ್ತು ದೇಶಕ್ಕಾಗಿ ತಮ್ಮ ಜೀವನ ಮುಡಿಪಿಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಹೇಳಿದರು.ಪ್ರಭಾರಿ ಮುಖ್ಯ ಶಿಕ್ಷಕಿ ಅನಿತಾ ಕುರುಡಪ್ಪನವರ ಮಾತನಾಡಿ, ಜ. ೨೬, ೧೯೫೦ರಂದು ಭಾರತವು ಸಾರ್ವಭೌಮ ಗಣತಂತ್ರ ದೇಶ ಎಂದು ಘೋಷಿಸಿಕೊಂಡು ಇದೀಗ ೭೪ ವರ್ಷಗಳು ಸಂದಿವೆ. ಸಂವಿಧಾನವನ್ನು ಅಳವಡಿಸಿಕೊಂಡ ಉದ್ದೇಶವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳಾದ ಸ್ವಾತಂತ್ರ್ಯ, ಸಮಾನತೆ, ಜತೆಗೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಇತರೆ ಹಕ್ಕುಗಳನ್ನು ನೀಡುವುದಾಗಿದೆ. ಬಲಿಷ್ಠ ಒಕ್ಕೂಟ ಸರ್ಕಾರವನ್ನು ರೂಪಿಸುವ ಅತ್ಯುತ್ತಮ ಮಾದರಿ ಸಂವಿಧಾನವನ್ನು ಅಳವಡಿಸಿಕೊಂಡಿರುವುದು ನಮ್ಮ ದೇಶದ ಹೆಮ್ಮೆಯ ಸಂಕೇತ ಎಂದು ಹೇಳಿದರು.
ಸಹ ಶಿಕ್ಷಕಿ ವಿದ್ಯಾ ಹೆಗಡೆ ಮಾತನಾಡಿ, ಸಂವಿಧಾನ ಮತ್ತು ಸ್ವಾತಂತ್ರ್ಯ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜಾತ್ಯತೀತ ದೇಶದ ಅಭಿವೃದ್ಧಿಗೆ ಇವೆರಡೂ ಮುಖ್ಯವಾಗಿದೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿ ಇಂದು ಸಮಾನತೆ ಬರುತ್ತಿದೆ. ಆದ್ದರಿಂದ ನಾವು ಸಂವಿಧಾನವನ್ನು ಗೌರವಿಸುವುದರೊಂದಿಗೆ ಅದರ ಆಶಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.ಎಸ್‌ಎಂಸಿ ಉಪಾಧ್ಯಕ್ಷೆ ಸುಮಂಗಲಾ ಪಾಟೀಲ, ಸದಸ್ಯರಾದ ಮಂಜಪ್ಪ ವಾಲ್ಮೀಕಿ, ಪ್ರಭುಸ್ವಾಮಿ ಹಿರೇಮಠ, ಮಂಜಪ್ಪ ಹಲಸೂರ, ಮಲ್ಲನಗೌಡ ಚನ್ನಮ್ಮನವರ, ಲಲಿತಾ ಸುಬ್ಬಣ್ಣನವರ, ರೇವಣಪ್ಪ ಬಾರ್ಕಿ, ಬಸವರಾಜ ಬಾರ್ಕಿ, ಈರಪ್ಪ ಬೂದಿಹಾಳ, ಹಜರತ್‌ಅಲಿ ಎತ್ತಿನಮನಿ ಇತರರು ಇದ್ದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಹಶಿಕ್ಷಕ ಚಿದಾನಂದ ಯರೇಶೀಮಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಸವಿತಾ ಎಚ್‌ಬಿಎಂ ವಂದಿಸಿದರು.