ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಿ: ನ್ಯಾಯಾಧೀಶ ಟಿ.ಎನ್.ಇನವಳ್ಳಿ

| Published : Jan 28 2024, 01:17 AM IST

ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಿ: ನ್ಯಾಯಾಧೀಶ ಟಿ.ಎನ್.ಇನವಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರಿಕರು ಯಾವುದೇ ಆಸೆ, ಅಮಿಷಗಳಿಗೆ ಒಳಗಾಗದೆ ಚುನಾವಣಾ ಸಂದರ್ಭಗಳಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ತಿಳಿಸಿದ್ದಾರೆ. ಹಾಸನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಸಲಹೆಕನ್ನಡಪ್ರಭ ವಾರ್ತೆ ಹಾಸನ

ನಾಗರಿಕರು ಯಾವುದೇ ಆಸೆ, ಅಮಿಷಗಳಿಗೆ ಒಳಗಾಗದೆ ಚುನಾವಣಾ ಸಂದರ್ಭಗಳಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ತಿಳಿಸಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ಹಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಜ್ಞಾವಿಧಿ ಸ್ವೀಕರಿಸುತ್ತೇವೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದನ್ನು ಮರೆಯುತ್ತೇವೆ. ಇದು ಬೇಸರದ ಸಂಗತಿ ಎಂದು ಹೇಳಿದರು.

ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ಕಲ್ಪಿಸಿದ್ದಾರೆ. ಇದನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಜತೆಗೆ ನಾಲ್ಕನೆ ಅಂಗವಾಗಿ ಪತ್ರಿಕಾ ರಂಗ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಜೀವನದಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಇತಿಹಾಸ ತಿಳಿದುಕೊಂಡು ಮಾತಿಗಿಂತ ಕೆಲಸ ಮಾಡಿ ಜತೆಗೆ ಸಮಯ ಪಾಲನೆಗೆ ಒತ್ತು ನೀಡಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳಿ ಎಂದರು.

ಕಾಲ ಬದಲಾಗಿದೆ ಎಂದು ಹೇಳುತ್ತೇವೆ. ಅದು ಹಾಗೆ ಇದೆ. ನಾವು ಬದಲಾಗಿದ್ದೇವೆ. ಸಮಾಜ, ಸಂಸ್ಕೃತಿ ನೋಡಿ ಮೂಲಸತ್ವದಲ್ಲಿ ಬದಲಾವಣೆಯಾಗಿಲ್ಲ, ನೈತಿಕತೆ ಇದ್ದರೆ ಕಾನೂನು ಬದ್ದವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ, ‘ಭಾರತ ಚುನಾವಣಾ ಆಯೋಗವು ತಿಳಿಸಿರುವಂತೆ ಮತದಾನ ಮುಖ್ಯವಾದುದು, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯವಾಕ್ಯದಂತೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಇದು ಎಲ್ಲರ ಜವಾಬ್ದಾರಿ. ೧೮ ವರ್ಷ ತುಂಬಿದ ಯುವ ಜನತೆ ಹೆಸರು ನೋಂದಾಯಿಸಿಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗದ ಸ್ಥಾಪನೆಯ ಸವಿ ನೆನಪಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಿ ಮುನ್ನಡೆಯುತ್ತಿರುವ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಎಂದರು.

ಕಾನೂನಿನ ಚೌಕಟ್ಟಿನಲ್ಲಿ ನಿಷ್ಪಕ್ಷ, ನ್ಯಾಯಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಪ್ರಜ್ಞಾವಂತ ಮತದಾರರು ಸರಿತಪ್ಪುಗಳ ಬಗ್ಗೆ ವಿಶ್ಲೇಷಣೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಿ ಮತ ಚಲಾಯಿಸಬೇಕು. ಯುವ ಮತದಾರರು ರಾಯಬಾರಿಗಳಾಗಿ ತಮಗೆ ದೊರೆತಿರುವ ಹಕ್ಕನ್ನು ಹೆಮ್ಮೆಯಿಂದ ಮತಚಲಾಯಿಸಿ ಮತದಾನ ನಮ್ಮ ಅಸ್ತಿತ್ವ ಹಾಗೂ ಹಕ್ಕು, ಮತದಾನದ ಮಹತ್ವ ಅರಿತು ದೇಶ ಕಟ್ಟು ನಿಟ್ಟಿನಲ್ಲಿ ತಪ್ಪದೆ ಎಲ್ಲರೂ ಮತ ಚಲಾವಣೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ‘ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ, ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ. ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ವಚನ ಸ್ವೀಕರಿಸುತ್ತೇವೆ ಎಂದು ಪ್ರತಿಜ್ಞಾವಿಧಿ ಬೋದಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹಿಮ್ಸ್ ನಿರ್ದೇಶಕ ಡಾ.ಸಂತೋಷ್, ಉಪ ವಿಭಾಗಾಧಿಕಾರಿ ಮಾರುತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ ಉಪಸ್ಥಿತರಿದ್ದರು. ತಹಸೀಲ್ದಾರ್ ಶ್ವೇತಾ ಸ್ವಾಗತಿಸಿದರು. ಲಕ್ಷ್ಮಿನಾರಾಯಣ ನಿರೂಪಿಸಿ ವಂದಿಸಿದರು.ಹಾಸನದ ಹಿಮ್ಸ್ ನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಉದ್ಘಾಟಿಸಿದರು.