ಬಣಜಿಗ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ

ಹೂವಿನಹಡಗಲಿ: ಬಣಜಿಗ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಕಾಂಚನ ಕುಮಾರ್ ಹೇಳಿದರು.

ಪಟ್ಟಣದಲ್ಲಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಥಿಕ, ಸಾಮಾಜಿಕವಾಗಿ ಸದೃಢವಾಗಿ ಬೆಳೆಯಲು ಹೊಂದಾಣಿಕೆ ಅತಿ ಮುಖ್ಯ. ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರಗತಿಗೆ ಪೂರಕವಾಗಿ ಕೆಲಸ ನಿರಂತರವಾಗಿ ಮಾಡಬೇಕು ಎಂದು ತಿಳಿಸಿದರು.

ಮಹಿಳೆಯರಿಗೆ ರಾಜಕೀಯ ಪಕ್ಷಗಳು ಸ್ಥಾನಮಾನ ನೀಡಬೇಕು. ಎಲ್ಲ ರಂಗಗಳಲ್ಲೂ ಮಹಿಳೆ ದಾಪುಗಾಲು ಹಾಕುತ್ತಾ ಸಮಾಜದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿರಿ ಎಂದರು.

ತಾಲೂಕು ಜಿಲ್ಲಾ ಘಟಕಗಳ ಚುನಾವಣೆ ಪ್ರತಿಕ್ರಿಯೆ ಬೈಲಾ ತಿದ್ದುಪಡಿ ಕುರಿತು ಮಾಹಿತಿ ಹಂಚಿಕೊಂಡರು.

ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಮುಂಡವಾಡ ಉಮೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಏಳಿಗೆಗೆ ಸದಾ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದರು.

ಗೌರವಾಧ್ಯಕ್ಷ ರುದ್ರಪ್ಪ ಕರಿಶೆಟ್ಟಿ, ರಾಜ್ಯ ಬಣಜಿಗ ವಿಶ್ವಸ್ಥ ಮಂಡಳಿ ಸದಸ್ಯ ಮುರುಗೇಶ ತುರಕಾಣಿ, ಹಿರೇಹಡಗಲಿ ಘಟಕದ ಅಧ್ಯಕ್ಷ ಶಿವಯೋಗೆಪ್ಪ ಹಲಗೇರಿ, ಗಿರಿಮಲ್ಲಿಗೆ ಮಹಿಳಾ ಸಹಕಾರಿಯ ಅಧ್ಯಕ್ಷ ಸವಿತಾ ಅಂಗಡಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಯಲಗಚ್ಚಿನ ಯುವ ಘಟಕದ ಅಧ್ಯಕ್ಷ ಐ.ಎಸ್.ವಿಜಯಕುಮಾರ್ ಇತರರಿದ್ದರು.

ಸವಿತಾ, ನಾಗರತ್ನ ಕುಂಚೂರು, ಎ.ಭುವನೇಶ್ವರಿ, ಶೈಲಜಾ ಪವಾಡಶೆಟ್ರು ನಿರ್ವಹಿಸಿದರು.

ತಾಲೂಕಿನ ವಿವಿಧ ಗ್ರಾಮಗಳ ಸಮಾಜದ ಬಾಂಧವರು ಭಾಗವಹಿಸಿದ್ದರು.