ಮಹಿಳೆಯರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿ: ಆರ್‌.ಪಿ.ಚಂದ್ರು

| Published : Oct 28 2024, 01:21 AM IST

ಸಾರಾಂಶ

ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ ಉದ್ದೇಶಗಳನ್ನು ಅರಿವು ಮೂಡಿಸುವ ಸಲುವಾಗಿಯೇ ಕಾಲೇಜುಗಳಲ್ಲಿ ಪ್ರೇರಣಾ ಶಿಬಿರಗಳನ್ನು ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ. ಮನೆಗಳಲ್ಲಿ ನಾಲ್ಕು ಗೋಡೆಯ ಮಧ್ಯೆ ಇರುವಂತಹ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಮಹಿಳೆಯರನ್ನು ಮುಖ್ಯಭೂಮಿಕೆಗೆ ತರುವುದು ಭಾರತ್ ಸ್ಕೌಟ್ಸ್ ಮತ್ತು ಗೈಡ್ ಪ್ರೇರಣಾ ಶಿಬಿರದ ಉದ್ದೇಶವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್‌ನ ಮಂಡ್ಯ ಜಿಲ್ಲಾ ಸಂಘಟಕ ಆರ್.ಪಿ.ಚಂದ್ರು ಹೇಳಿದರು.

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ ಘಟಕವು ಐಕ್ಯುಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ‘ಪ್ರೇರಣಾ ಶಿಬಿರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ ಉದ್ದೇಶಗಳನ್ನು ಅರಿವು ಮೂಡಿಸುವ ಸಲುವಾಗಿಯೇ ಕಾಲೇಜುಗಳಲ್ಲಿ ಪ್ರೇರಣಾ ಶಿಬಿರಗಳನ್ನು ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ. ಮನೆಗಳಲ್ಲಿ ನಾಲ್ಕು ಗೋಡೆಯ ಮಧ್ಯೆ ಇರುವಂತಹ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

ಆಡಳಿತಾಧಿಕಾರಿ ನಿವೇದಿತಾ ನಾಗೇಶ್ ಮಾತನಾಡಿ, ಆಡಳಿತದಲ್ಲಿ ಮಹಿಳೆಯರು ಅತ್ಯಂತ ನಿರ್ಣಾಯಕರಾಗಿದ್ದಾರೆ. ಮಹಿಳೆಯರನ್ನು ಸಾರ್ವಜನಿಕ ಸಂಸ್ಥೆಗಳು ಆಡಳಿತದಿಂದ ಹೊರಗಿಟ್ಟರೆ ಅದು ಪ್ರಜಾಪ್ರಭುತ್ವದ ಸಿಂಧುತ್ವ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ. ಸಂವಿಧಾನ ಲಿಂಗ ಸಮಾನತೆಗೆ ಒತ್ತು ನೀಡುವ ಹಲವಾರು ವಿಧಿಗಳಿವೆ ಕಾಲೇಜು ಹಂತದಲ್ಲಿಯೇ ಈ ರೀತಿ ಶಿಬಿರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ಮತ್ತು ಸಂವಿಧಾನದಲ್ಲಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದಾಗ ಇದು ಹೆಚ್ಚು ಕಾರ್ಯಗತಗೊಳ್ಳುತ್ತದೆ. ಮಹಿಳಾ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ನಿವೃತ್ತ ಕೃಷಿ ಅಧಿಕಾರಿ ಎಸ್.ರಾಜೇಂದ್ರ ಮಾತನಾಡಿ, ಕೃಷಿಯಲ್ಲಿ ಮಹಿಳೆ ಎಂದರೆ ಕೇವಲ ಬಿತ್ತನೆ, ನಾಟಿ, ಕಳೆ ಕಿತ್ತಲು ಮತ್ತು ಕೊಯ್ಲುಗೆ ಮಾತ್ರ ಸೀಮಿತ ಎಂದು ಭಾವಿಸಲಾಗಿದೆ. ಕೃಷಿ ಸಮುದಾಯದಲ್ಲಿ ಮಹಿಳೆಯರಿಗೆ ಸಾಕ್ಷರತೆಯ ಅರಿವು ಕಡಿಮೆ ಇದ್ದು ಕೃಷಿ ಉತ್ಪಾದನೆ, ವಿತರಣೆ, ಮಾರುಕಟ್ಟೆಗಳಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಬೇಕಿದೆ’ ಎಂದರು.

ಪ್ರಾಂಶುಪಾಲ ಡಾ. ನಿಶಾಂತ್ ಎ ನಾಯ್ಡು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿಯೇ ಪ್ರೇರಣ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ನಮ್ಮ ಕಾಲೇಜಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪರಿಶ್ರಮಿಸಲು ನಮ್ಮ ಕಾಲೇಜು ಸದಾ ಬದ್ಧವಾಗಿದ್ದು ಅದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡಾಗ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ಇದಕ್ಕೆ ಸಹಕಾರಿಯಾದ ಸಂಸ್ಥೆಯ ಅಧ್ಯಕ್ಷರಾದ ಸಿ.ಎಸ್. ಪುಟ್ಟರಾಜು ಹಾಗೂ ಸಿಇಓ ಸಿ.ಪಿ. ಶಿವರಾಜು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಸಮಾರಂಭದಲ್ಲಿ ವೇದಿಕೆಯಲ್ಲಿ ರೋವರ್ಸ್ ಮತ್ತು ರೇಂಜರ್ ಘಟಕದ ಸಂಯೋಜಕ ವಿ.ಶ್ರೀಧರ, ಹಾಗೂ ಐಕ್ಯುಎಸಿ ಸಂಯೋಜಕ ರಘುನಂದನ್ ಉಪಸ್ಥಿತರಿದ್ದರು.