ಸಾರಾಂಶ
ಶಿರಹಟ್ಟಿ: ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಪಪಂ ಆಡಳಿತ ಮಂಡಳಿಯವರ ಸಹಕಾರದೊಂದಿಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ೧೮ ವಾರ್ಡ್‌ಗಳ ಸದಸ್ಯರ ಮತ್ತು ಸಾರ್ವಜನಿಕರ ಜೊತೆಯಲ್ಲಿ ವಾರ್ಡ್ ಸಭೆ ನಡೆಸಿ ಸಮಸ್ಯೆ ಆಲಿಸಿದ್ದು, ಆಡಳಿತ ಮಂಡಳಿಯ ಅನುಮೋದನೆ ಕೂಡ ಪಡೆದಿದ್ದು, ತುರ್ತು ಸರ್ಕಾರಕ್ಕೆ ವರದಿ ಸಲ್ಲಿಸಿ ಅನುದಾನ ಬಂದ ಕೂಡಲೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ಹೇಳಿದರು.ಸೋಮವಾರ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಜರುಗಿದ ಪಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ೨೦೨೫-೨೬ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ₹ ೩ ಲಕ್ಷ ಮೊತ್ತದ ಅನುದಾನದಲ್ಲಿ ಪಪಂ ವ್ಯಾಪಿಯ ಘನತ್ಯಾಜ್ಯ ವಿಲೇವಾರಿ ಜಮೀನಿನಲ್ಲಿ ಬೋರವೆಲ್ ಕೊರೆಸಿ ಪಾವರ್ ಪಂಪ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಬ್ಲಾಕ್ ಸ್ಪಾಟ್‌ಗಳಿಗೆ ₹ ೧೨.೮೦ ಲಕ್ಷ ಮೊತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ವಾರ್ಡ್ ನಂ. ೧೫ ಅಂಬೇಡ್ಕರ್ ಸಮುದಾಯ ಭವನದ ಹತ್ತಿರ ಹಾಗೂ ರಫೀಕ ಹೆಗಡೆ ಮನೆ ಹತ್ತಿರ ಸಿಸ್ಟರ್ನ ಟ್ಯಾಂಕ್ ಅಳವಡಿಸಿ ಸಮರ್ಪಕ ನೀರು ಸರಬರಾಜಿಗೆ ಆದ್ಯತೆ ನೀಡಲು ಕ್ರಮವಹಿಸಲಾಗಿದೆ ಎಂದರು.₹ ೯೬ ಸಾವಿರ ಮೊತ್ತದಲ್ಲಿ ವಾರ್ಡ್ ನಂ. ೧೪ ವಾಲ್ಮೀಕಿ ಸಮುದಾಯ ಭವನದ ಮೊದಲನೇ ಮಹಡಿಯಲ್ಲಿ ಕೊಠಡಿ ಬಣ್ಣ, ಬಾಗಿಲು ಕಿಟಕಿ ಅಳವಡಿಸುವುದು. ₹ ೫ ಲಕ್ಷ ವೆಚ್ಚದಲ್ಲಿ ವಾರ್ಡ್ ನಂ. ೧ರ ಬಸವೇಶ್ವರ ಗುಡಿ ಹತ್ತಿರ, ವಾರ್ಡ್ ನಂ. ೧೭ ಅಯ್ಯಪ್ಪ ಗುಡಿ ಹತ್ತಿರ, ವಾರ್ಡ್ ನಂ. ೧೧ ಯಲಿಶಿರುಂಜ ರಸ್ತೆಯ ಗೌಡರ ಹಳ್ಳದ ಹತ್ತಿರ ಹೊಸ ಬೋರವೆಲ್ ಕೊರೆಸಿ ಪಾವರ್ ಪಂಪ್ ಅಳವಡಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ.ಅದೇ ರೀತಿ ವಾರ್ಡ್ ನಂ. ೨ ಹರಿಪೂರ ಗ್ರಾಮದ ಗೋರಿ ಹತ್ತಿರ ಹಾಗೂ ವಾರ್ಡ್ ನಂ. ೧ರ ಖಾನಾಪೂರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ೫ ಎಚ್‌ಪಿ ಮತ್ತು ೭.೫ ಎಚ್‌ಪಿ ಮೋಟಾರ್, ಕೇಬಲ್, ಪೈಪ್, ಸ್ಟಾರ್ಟರ್ ಅಳವಡಿಸುವುದು. ವಾರ್ಡ್ ನಂ. ೨ ಹರಿಪೂರ ಬಸ್ ನಿಲ್ದಾಣದ ಹತ್ತಿರ ಮತ್ತು ವಾರ್ಡ್ ನಂ. ೧೫ ಯಲ್ಲಮ್ಮ ದೇವಸ್ಥಾನದ ಹತ್ತಿರ ಹೊಸದಾಗಿ ಬೋರವೆಲ್ ಕೊರೆಸಿ ಪಾವರ್ ಪಂಪ್ ಅಳವಡಿಸುವ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಒಟ್ಟು ₹ ೨೯.೩೨ ಲಕ್ಷ ಮೊತ್ತದ ಈ ಎಲ್ಲ ಕಾಮಗಾರಿಗಳ ಟೆಂಡರ್ ಕೂಡ ಮುಗಿದಿದ್ದು, ಈಗಾಗಲೇ ಎಲ್ಲ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಕೂಡ ನೀಡಲಾಗಿದೆ. ಎಸ್‌ಎಫ್‌ಸಿ ಅನುದಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೂ ಕೂಡ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಲಾಗಿದೆ ಎಂದರು.ಸುಮಾರು ೫ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೂತನ ಪಟ್ಟಣ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿ ವತಿಯಿಂದ ಅನುಮೋದನೆ ಪಡೆಯಲಾಗಿದೆ. ₹ ೧.೫ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಈ ಕಟ್ಟಡವನ್ನು ಪಟ್ಟಣದಲ್ಲಿರುವ ಹಳೆ ಕಟ್ಟಡ ನೆಲಸಮಗೊಳಿಸಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು. ಇದರ ಜತೆಯಲ್ಲಿ ವಾರ್ಡ್ ನಂ. ೫ರಲ್ಲಿ ನಿಗದಿತ ಸಮಯಕ್ಕೆ ನೀರು ಪೂರೈಕೆ ಮಾಡುವುದು, ಗಟಾರ ಸ್ವಚ್ಛಗೊಳಿಸುವುದು, ಇಂಗಳಗಿ ಇವರ ಮನೆಯಿಂದ ಗೂಳಪ್ಪ ಕರಿಗಾರ ಮನೆವರೆಗೆ ರಸ್ತೆ ಮಾಡಿಸುವ ಕುರಿತು ಅನುದಾನ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆ ನಡೆಯಿತು. ಜತೆಗೆ ಖಾಲಿ ಸೈಟ್ ಮಾಲೀಕರಿಗೆ ನೋಟಿಸ್ ನೀಡಿ ಖುಲ್ಲಾ ಜಾಗೆ ಸ್ವಚ್ಛಗೊಳಿಸಲು ಸೂಚಿಸುವ ಕುರಿತು ನಿರ್ಣಯಿಸಲಾಯಿತು. ಪಟ್ಟಣ ಪಂಚಾಯತ್ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಅಭಿಯಂತರ ವಿ.ಪಿ. ಕಾಟೆವಾಲೆ, ಸದಸ್ಯರಾದ ಪರಮೇಶ ಪರಬ, ಇಸಾಕ ಆದ್ರಳ್ಳಿ, ಸಂದೀಪ ಕಪ್ಪತ್ತನವರ, ಹಸರತ ಢಾಲಾಯತ, ಯಶೋದಾ ಡೊಂಕಬಳ್ಳಿ, ಅನಿತಾ ಬಾರಬರ, ದಾವಲಬಿ ಮಾಚೇನಹಳ್ಳಿ, ಚನ್ನಬಸವ್ವ ಕಲಾದಗಿ ಹಾಗೂ ಮುತ್ತಕ್ಕ ನಾಯ್ಕರ ಇದ್ದರು.
;Resize=(128,128))
;Resize=(128,128))
;Resize=(128,128))