ಸಾರಾಂಶ
ಬಸವಕಲ್ಯಾಣ ತಾಲೂಕಿನ ಖೇರ್ಡಾ (ಬಿ) ಗ್ರಾಮದ ಗಡಿಯಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸಂವಿಧಾನ ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಸಹಾಯಕ ಆಯುಕ್ತರಾದ ಪ್ರಕಾಶ ಕುದರಿ ನುಡಿದರು.ತಾಲೂಕಿನ ಖೇರ್ಡಾ (ಬಿ) ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಸ್ವಾಗತಿಸಿ ಮಾತನಾಡಿದ ಅವರು, ಯುವಕರು ಸಂವಿಧಾನ ಬದ್ಧವಾಗಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆದು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿಕೊಂಡು ದೇಶ ಮತ್ತು ಸಮಾಜದ ಸೇವೆ ಮಾಡುವ ಮುಖಾಂತರ ಪೋಷಕರ ಹಾಗೂ ಗ್ರಾಮದ ಹೆಸರನ್ನು ಸಹ ಬೆಳೆಸಬೇಕೆಂದರು.
ನೋಡಲ್ ಅಧಿಕಾರಿ ದೀಲಿಪಕುಮಾರ ಉತ್ತಮ ಮಾತನಾಡಿ, ಈ ಜಾಥಾದ ಮುಖಾಂತರ ಬೀದರ್ ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಕುರಿತು ಕಾರ್ಯಕ್ರಮ ನಡೆಯುತ್ತಿದ್ದು ಸಂವಿಧಾನವು ಮತ್ತು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳು ಒಂದೆ ಆಗಿದೆ. ಮಹಾತ್ಮರ ತತ್ವಗಳನ್ನು ಸಹ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪರಿವರ್ತನೆ ತರುವ ಮುಖಾಂತರ ದೇಶದಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆ, ಭಾತೃತ್ವದ ಭಾವನೆಗಳನ್ನು ಬಿತ್ತಬೇಕಾಗಿದೆ ಎಂದರು.ಗ್ರಾಪಂ ಅಧ್ಯಕ್ಷೆ ಸವಿತಾ ಜೈಭೀಮ ಕಾಂಬಳೆ ಅಧ್ಯಕ್ಷತೆ ವಹಿಸಿದರು. ಪಿಡಿಓ ಗ್ರಾಮದ ಸದಸ್ಯರು ಪ್ರಮುಖರು ಉಪಸ್ಥಿತರಿದ್ದರು.
ಖೇರ್ಡಾ (ಬಿ) ಗಡಿಯಲ್ಲಿ ತಹಸೀಲ್ದಾರ್ ಶಾಂತನಗೌಡ, ತಾಪಂ ಇಒ ಮಹಾದೇವ, ಸಮಾಜ ಕಲ್ಯಾಣ ಅಧಿಕಾರಿ ಲಿಂಗರಾಜ ಅರಸ, ಮುಂತಾದವರು ಉಪಸ್ಥಿತರಿದ್ದು ಡೊಳ್ಳು ಭಾರಿಸುವ ಮುಖಾಂತರ ಜಾಥಾಗೆ ಸ್ವಾಗತಿಸಿದರು.ನಂತರ ಭವ್ಯ ಮೇರವಣಿಗೆ ನಡೆಯಿತು. ಬುದ್ಧ, ಬಸವ, ಅಂಬೇಡ್ಕರ್ ಪಾತ್ರಧಾರಿಗಳು ಭಾಗವಹಿಸಿದರು. ನಂತರ ಖೇಳಗಿ, ಕಲಖೋರಾ, ಚಿಕನಗಾಂವ, ಮುಡಬಿ ಎಕಲೂರ ಗ್ರಾಮಗಳಲ್ಲಿ ಸಂಚರಿಸಿತು.