ಸಾರಾಂಶ
- ಛಲವಾದಿ ಮಹಾಸಭಾದಿಂದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಸಮಾರಂಭ
- ಅಕ್ಟೋಬರ್/ನವೆಂಬರ್‌ನಲ್ಲಿ ದಾವಣಗೆರೆ, ಚಿತ್ರದುರ್ಗ, ಬೆಂಗಳೂರಿನಲ್ಲಿ ಒನಕೆ ಓಬವ್ವ ಸಮಾವೇಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆಹಿಂದೊಂದು ಕಾಲದಲ್ಲಿ ಊರಿನಿಂದ ಆಚೆ ಇದ್ದ ಸಮುದಾಯಗಳ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಇಂದು ಗಮನಾರ್ಹ ಸಾಧನೆ ಮಾಡುತ್ತಿರುವುದು ಸಮಾಜ ಬದಲಾವಣೆ ಆಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣದಿಂದ ದೂರ ಇದ್ದ, ಶಿಕ್ಷಣವನ್ನು ಕೇಳಿದರೆ ಕಿವಿಯಲ್ಲಿ ಕಾದ ಸೀಸ ಬಿಡಿಸಿಕೊಳ್ಳುತ್ತಿದ್ದ, ಊರಿನಿಂದಾಚೆ ಇದ್ದ ಸಮುದಾಯದ ಮಕ್ಕಳು ಈಗ ಶೇ.100 ಅಂಕ ಪಡೆಯುತ್ತಿರುವುದು ಬದಲಾವಣೆಯೇ ಸರಿ. ಇಂತಹದ್ದೆಲ್ಲಾ ಸಾಧ್ಯವಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರರಿಂದ. ಶಿಕ್ಷಣದ ಮೂಲಕ ಬದಲಾವಣೆ ತರಬಹುದೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಅಂಬೇಡ್ಕರ್. ಇಂತಹ ಜನಾಂಗ ಇನ್ನೂ ಬದಲಾವಣೆಯಾಗದೇ ಹೋದರೆ ಈಗಲೂ ಊರಿನಿಂದ ಆಚೆಗೆ ಇರಬೇಕಾಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಛಲವಾದಿ ಸಮುದಾಯದ ವೀರನಾರಿ ಒನಕೆ ಓಬವ್ವನ ಹೆಸರಿನಲ್ಲಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ದಾವಣಗೆರೆ, ಚಿತ್ರದುರ್ಗ, ಬೆಂಗಳೂರಿನಲ್ಲಿ ಅಭೂತಪೂರ್ವ ಸಮಾವೇಶ ಹಮ್ಮಿಕೊಳ್ಳುವ ಉದ್ದೇಶವಿದೆ. ಇಡೀ ರಾಜ್ಯ, ರಾಷ್ಟ್ರದ ಇತಿಹಾಸದಲ್ಲಿ ದಾಖಲಾಗುವಂತಹ ಸಮಾವೇಶ ಇದಾಗಬೇಕು. ಛಲಗಾತಿ ಓಬವ್ವನ ಧೈರ್ಯವು ನಮಗೂ ಬರಬೇಕೆಂಬ ಸದುದ್ದೇಶದಿಂದ ಸುಮಾರು 5ರಿಂದ 10 ಲಕ್ಷ ಛಲವಾದಿ ಸಮಾಜ ಬಾಂಧವರನ್ನು ಸೇರಿಸಿ, ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಡಾ. ಜಿ.ಪರಮೇಶ್ವರ ತಿಳಿಸಿದರು.ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನದಲ್ಲಿ ಜಾತಿ ಹೆಸರು ಬಳಕೆ ಮಾಡುವಂತಿಲ್ಲ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಎಂಬ ಪದಗಳನ್ನಷ್ಟೆ ಬಳಸಬೇಕು. ಆದರೆ, ಅದೇ ಸಮುದಾಯದ ನೀವು ಜಾತಿ ಮೂಲಕ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಸಮಂಜಸವಲ್ಲ. ಬೇರೆಯವರು ಇದೇ ಮಾತು ಹೇಳಿದರೆ ಜಾತಿ ನಿಂದನೆ ದೂರು ದಾಖಲಿಸುತ್ತಾರೆ. ಆದರೆ, ನಿಮ್ಮಿಂದಲೇ ಈ ಮಾತುಗಳನ್ನು ಅಂತಹವರು ಜಾಣ್ಮೆಯಿಂದ ಹೇಳಿಸುತ್ತಿದ್ದಾರೆ ಎಂಬುದು ಅರ್ಥವಾಗದಿದ್ದರೆ ನೀವು ಯಾವ ಅಂಬೇಡ್ಕರ್ ವಾದ ಮಾಡುತ್ತೀರಿ ಎಂದು ಪ್ರಶ್ನಿಸಿದರು.
2 ದಶಕದಿಂದಲೂ ದಾವಣಗೆರೆಯಲ್ಲಿ ನನೆಗುದಿಗೆ ಬಿದ್ದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಆದರೆ, ಜಾಗದ ಬಗ್ಗೆ ಇರುವ ಜಿಜ್ಞಾಸೆ ಪರಿಹರಿಸಿಕೊಂಡು ಬಂದರೆ ಶೀಘ್ರವೇ ಅನುದಾನ ನೀಡಿ, ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಬಳಿ ಚರ್ಚಿಸಿ, ಸೂಕ್ತ ಸ್ಥಳ ನಿಗದಿಪಡಿಸಿ. ನೀವು ಸ್ಥಳ ನಿಗದಿಪಡಿಸಿದ್ದಾಗಿ ಹೇಳಿದರೆ ಇನ್ನೊಂದು ವಾರದಲ್ಲೇ ಭೂಮಿ ಪೂಜೆ ನೆರವೇರಿಸುವ ಜೊತೆಗೆ ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಜಾತಿಯ ಸಂಕೋಲೆಯಿಂದ ಮಕ್ಕಳು ಹೊರ ಬಂದು, ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದರೆ ಉತ್ತಮ ಬದುಕು, ಉಜ್ವಲ ಭವಿಷ್ಯ ಹೊಂದಬಹುದು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು, ಶೈಕ್ಷಣಿಕ ಸಾಧನೆ ಮೆರೆಯುವ ಮೂಲಕ ಸಾಧನೆ ಮಾಡುವಂತೆ ವಿದ್ಯಾರ್ಥಿ ಯುವಜನರಿಗೆ ತಿಳಿಸಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಛಲವಾದಿ ಸಮಾಜದ ಜಿಲ್ಲಾ ಅಧ್ಯಕ್ಷ, ನಿವೃತ್ತ ಎಸ್‌ಪಿ ಎನ್.ರುದ್ರಮುನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಕೆ.ಎಸ್.ಬಸವಂತಪ್ಪ, ಡಿ.ಜಿ.ಶಾಂತನಗಡ, ಶಿವಗಂಗಾ ವಿ.ಬಸವರಾಜ, ಬಿ.ದೇವೇಂದ್ರಪ್ಪ ಮಾತನಾಡಿದರು.ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ, ಮಾಜಿ ಶಾಸಕರಾದ ಎಂ.ಸಿ. ವೇಣುಗೋಪಾಲ್, ಎಸ್. ರಾಮಪ್ಪ, ಎಚ್.ಸಿ.ನಿರಂಜನಮೂರ್ತಿ, ಎಸ್.ಶೇಖರಪ್ಪ, ಎಚ್.ಕೆ. ಬಸವರಾಜ, ಜಯಣ್ಣ, ನಾಗಭೂಷಣ, ರೇವಣಸಿದ್ದಪ್ಪ, ಕೊಟ್ರಬಸಪ್ಪ, ಫಕೀರಪ್ಪ, ಈಶ್ವರಪ್ಪ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ ಇತರರು ಇದ್ದರು. ಸುಮಾರು 65 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.
- - -ಬಾಕ್ಸ್ * ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ: ಸಚಿವ ದಾವಣಗೆರೆ: ಇಡೀ ದೇಶದಲ್ಲಿಯೇ ಜಾತಿ ಜನ ಸಂಖ್ಯೆಗೆ ಅನುಗುಣವಾಗಿ ಆಯವ್ಯಯದಲ್ಲಿ ಎಸ್‌ಇಪಿ-ಟಿಎಸ್‌ಪಿ ಯೋಜನೆ ಮೂಲಕ ಶೇ.24.1ರಷ್ಟು ಅನುದಾನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮೀಸಲಿಟ್ಟಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಭಾನುವಾರ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ₹8-₹9 ಸಾವಿರ ಕೋಟಿ ಇದ್ದ ಸಮಾಜ ಕಲ್ಯಾಣ ಇಲಾಖೆ ಅನುದಾನ ಈಗ ₹40 ಸಾವಿರ ಕೋಟಿ ತಲುಪಿದೆ ಎಂದರು.ಸ್ವಾಭಾವಿಕವಾಗಿ ಆಯಾ ಸಮುದಾಯ ಉದ್ದೇಶಕ್ಕೆ ಮಾತ್ರವೇ ಇಂತಹ ಅನುದಾನ ಬಳಸಬೇಕು. ಒಂದುವೇಳೆ ಅನುದಾನವನ್ನು ನಿರ್ದಿಷ್ಟ ಸಮುದಾಯಗಳಿಗೆ ಬಳಸದಿದ್ದರೆ ಅಂತಹ ಅಧಿಕಾರಿಗಳಿಗೆ ಶಿಕ್ಷೆ ಕೊಡುವ ಕಾನೂನು ಮಾಡಲಾಗಿದೆ ಎಂದು ಹೇಳಿದರು.
ಆದರೆ, ವಿರೋಧ ಪಕ್ಷದವರು ಎಸ್‌ಇಪಿ-ಟಿಎಸ್‌ಪಿಗೆ ಇಟ್ಟಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ಕೊಟ್ಟಿದ್ದಾರೆ ಎಂಬುದಾಗಿ ಆರೋಪಿಸುತ್ತಿದ್ದಾರೆ. ನಾವೇ ಕಾನೂನು ಮಾಡಿ, ನಾವೇ ಹಣವನ್ನೂ ತೆಗೆದಿರಿಸಿದ್ದೇವೆ. ವಾಸ್ತವ ಹೀಗಿರುವಾಗ ಇಂತಹ ಅನುದಾನವನ್ನು ಬೇರೆಯವರಿಗೆ ಕೊಡಲು ಹೇಗೆ ಸಾಧ್ಯ ಎಂದು ಡಾ. ಜಿ.ಪರಮೇಶ್ವರ ಪ್ರಶ್ನಿಸಿದರು.- - - -28ಕೆಡಿವಿಜಿ4:
ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಇತರ ಗಣ್ಯರ ಇದ್ದರು.-28ಕೆಡಿವಿಜಿ5:
ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ- ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಸಚಿವರಾದ ಡಾ.ಜಿ.ಪರಮೇಶ್ವರ, ಡಾ.ಎಚ್.ಸಿ.ಮಹದೇವಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು.-28ಕೆಡಿವಿಜಿ6:ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ, ಡಾ. ಎಚ್.ಸಿ. ಮಹದೇವಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಇತರರು ಪ್ರತಿಜ್ಞಾ ಸ್ವೀಕರಿಸಿದರು.