ಸಾರಾಂಶ
ಹುಬ್ಬಳ್ಳಿ:
ಮಾದಕ ವಸ್ತು ಬಳಕೆದಾರರ ಪತ್ತೆಗಾಗಿ ಈಗಾಗಲೇ ಪ್ರತಿ ಠಾಣೆಯಲ್ಲೂ ಪ್ರತ್ಯೇಕ ತನಿಖಾ ತಂಡ ರಚಿಸಲಾಗುತ್ತಿದೆ. ಈ ಮೂಲಕ ಇಡೀ ಜಾಲದ ಪತ್ತೆಗಾಗಿ ಕೆಲವೇ ದಿನಗಳಲ್ಲಿ ಮೆಗಾ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.ನಗರದ ಕಿಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ ಕುರಿತು ಭಾನುವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಳಕೆದಾರರಿಗೆ ಎಲ್ಲಿಂದ ಮತ್ತು ಯಾರಿಂದ ಮಾದಕವಸ್ತು, ಹಣ ಪೂರೈಕೆ ಆಗುತ್ತದೆ ಎಂಬುದರ ತನಿಖೆ ನಡೆಸಲಾಗುವುದು ಎಂದರು.
ಆಳವಾದ ತನಿಖೆ:ಹು-ಧಾ ಮಹಾನಗರ ವ್ಯಾಪ್ತಿಯ 15 ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ಮಾದಕವಸ್ತು ಬಳಕೆದಾರರನ್ನು (ಶಂಕಿತ) ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಪಾಸಿಟಿವ್ ಬಂದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಆಳವಾದ ತನಿಖೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಸದ್ಯ ವಶಕ್ಕೆ ಪಡೆದಿರುವ ಶಂಕಿತ ಬಳಕೆದಾರರನ್ನು ತಜ್ಞ ವೈದ್ಯರ ನೇತೃತ್ವದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪಾಲಕರನ್ನು ಕರೆಸಿ ಮಕ್ಕಳ ಬಗೆಗಿನ ಮಾಹಿತಿ ಒದಗಿಸಿ ತಿಳಿವಳಿಕೆ ನೀಡಲಾಗುತ್ತಿದೆ. ಅಲ್ಲದೇ, ತಮ್ಮ ಮಕ್ಕಳನ್ನು ವ್ಯಸನ ಮುಕ್ತವಾಗಿಸಲು ಪಾಲಕರಿಗೆ ಇದೊಂದು ಸದಾವಕಾಶವಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಕ್ರಮ ತಡೆಗಟ್ಟಲು ಕ್ರಮ:ನಗರದ ವಿವಿಧ ಅಡ್ಡೆಗಳಲ್ಲಿ ಮಾದಕವಸ್ತು ಬಳಕೆ ಮಾಡುತ್ತಿದ್ದ 399 ಜನರನ್ನು ಗುರುತಿಸಿ ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸಂಬಂಸಿದಂತೆ 103 ಹಾಟ್‌ಸ್ಪಾಟ್ ಸಹ ಗುರುತಿಸಲಾಗಿದೆ. ಆದರೆ, ಶಾಲಾ-ಕಾಲೇಜು ಆವರಣಗಳಿಗೆ ಇನ್ನೂ ಕಾಲಿಟ್ಟಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳ ಹೆಸರಿಗೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಲಾಗಿದ್ದು, ಮುಂದಿನ ವಾರದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕರ ಜತೆಗೆ ಸಮಾಲೋಚನೆ ನಡೆಸಲಾಗುವುದು. ಈ ವೇಳೆ ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ಅಕ್ರಮಗಳ ಮಾಹಿತಿ ಪಡೆದು ಅದನ್ನು ತಡೆಗಟ್ಟಲು ಕ್ರಮವಹಿಸಲಾಗುವುದು ಎಂದರು.