ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಪ್ರಗತಿಗೆ ಮಾರಕವಾಗುತ್ತಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲಾ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಪ್ರಕೃತಿಯಲ್ಲಿ ಏರುಪೇರು ಉಂಟಾಗಿ ಮಾನವನ ಬದುಕು ದುಸ್ತರವಾಗುತ್ತಿದೆ ಎಂದು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಜೆ.ಬ್ಯಾಡರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಜೆ.ಬ್ಯಾಡರಹಳ್ಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲಿ ಜನಸಂಖ್ಯೆ ಅತೀ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಅಜ್ಞಾನ, ಮೂಢನಂಬಿಕೆ, ಅನಕ್ಷರತೆ, ಬಾಲ್ಯವಿವಾಹ, ಜನಿಸುವ ಮಕ್ಕಳ ಮಧ್ಯೆ ಅಂತರವಿಲ್ಲದಿರುವುದು, ಗಂಡು ಮಗು ಬೇಕೆಂಬ ಹಂಬಲ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಜನಸಂಖ್ಯೆ ಸ್ಫೋಟದಿಂದಾಗಿ ದೇಶದ ಅಭಿವೃದ್ಧಿಯು ಕುಂಠಿತಗೊಳ್ಳುತ್ತಿದೆ ಎಂದು ಹೇಳಿದರು.ಕುಟುಂಬದಲ್ಲಿ ಸಂತೋಷ ಸಮೃದ್ಧಿ ಜೀವನ ನಡೆಸಲು ಕುಟುಂಬ ಯೋಜನೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ವಯಸ್ಸಿಗೆ ಪಾಲಕರು ಮಕ್ಕಳ ಮದುವೆ ಮಾಡಬೇಕು. ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸಲು ಅವರಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಜನಸಂಖ್ಯೆ ಸ್ಥಿರತೆಗಾಗಿ ಜಾಗೃತಿ ಅತ್ಯವಶ್ಯಕವಾಗಿದ್ದು, ತಾತ್ಕಾಲಿಕ ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಬಡತನ ಮತ್ತು ಜನಸಂಖ್ಯೆ ಯಾವುದೇ ರಾಷ್ಟ್ರದ ಬೆಳವಣಿಗೆಗೆ ದೊಡ್ಡ ಸವಾಲಾಗಿದೆ. ಮಹಿಳೆಗೆ ಕುಟುಂಬದ ಸ್ವರೂಪದ ನಿರ್ಧಾರದ ಸ್ವಾತಂತ್ರ್ಯ ನೀಡುವುದರ ಮೂಲಕ ಜನಸಂಖ್ಯೆ ಬೆಳವಣಿಗೆ ತಡೆಯಬಹುದಾಗಿದೆ ಎಂದು ಹೇಳಿದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ಜನಸಂಖ್ಯೆ ನಿಯಂತ್ರಣದ ಅರಿವು, ವೈದ್ಯಕೀಯ ಸೌಲಭ್ಯಗಳು, ಸರಕಾರದ ನೆರವು ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಬೇಕಾಗಿದೆ. ಮಗುವನ್ನು ಪಡೆಯುವ ಸ್ವಾತಂತ್ರ್ಯವನ್ನು ಪುರುಷರ ಬದಲು ಮಹಿಳೆಯರಿಗೆ ನೀಡಿದಾಗ ಜನಸಂಖ್ಯೆ ನಿಯಂತ್ರಣ ಸಾಧ್ಯವಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೂರ್ಣಿಮಾ, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಪದ್ಮರೇಖಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ತಸ್ನಿಂ ಅರಾ, ಹಿರಿಯ ಮಹಿಳಾ ಆರೋಗ್ಯ ಸುರಕ್ಷತಾ ಅಧಿಕಾರಿ ನಳಿನಾ, ದತ್ತಾಂಶ ಅಧಿಕಾರಿ ಜ್ವಾಲಿನಿ, ಸಮುದಾಯ ಆರೋಗ್ಯ ಅಧಿಕಾರಿ ಮನೋಜ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸಾದ್, ಫಾರ್ಮಸಿ ಅಧಿಕಾರಿ ಶೈಲಜಾ ಮೊದಲಾದವರು ಉಪಸ್ಥಿತರಿದ್ದರು.