ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ರಿಯಾ ಯೋಜನೆಗಳ ಅನುದಾನವನ್ನು ಜನಪ್ರತಿನಿಧಿಗಳ ಮೂಲಕ ಬಿಡುಗಡೆಗೊಳಿಸುವ ಸಂಬಂಧ ಜಿಪಂ ಸಿಇಒ ಭೇಟಿ ಮಾಡಿದ್ದ ವೇಳೆ ಸಿಇಒ ಸ್ನೇಹಲ್ ಲೋಖಂಡೆ ಜೊತೆ ಕಾಂಗ್ರೆಸ್ ನಾಯಕರ ಜಟಾಪಟಿ ನಡೆದಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಶ್ರೀನಿವಾಸ ಕರಿಯಣ್ಣ ನೇತೃತ್ವದಲ್ಲಿ ಜಿಪಂ ಸಿಇಒ ಅವರನ್ನು ಮುಖಂಡರು ಭೇಟಿಯಾದರು. ಈ ವೇಳೆ ಕೇವಲ ಶಾಸಕರು ನೀಡಿದ ಶಿಫಾರಸು ಪತ್ರವಿರುವ ಕಾಮಗಾರಿಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಜಿಪಂ ಮತ್ತು ತಾಪಂ ಮಾಜಿ ಸದಸ್ಯರು ತಿಳಿಸಿದ ಕಾಮಗಾರಿಗಳಿಗೂ ಅನುದಾನ ನೀಡುವಂತೆ ಆಗ್ರಹಿಸಿದರು. ತಾಪಂ ಮತ್ತು ಜಿಪಂಗೆ ಚುನಾವಣೆ ನಡೆಯದೇ 2 ವರ್ಷಗಳೇ ಕಳೆದಿದೆ. ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನ ಜನಪ್ರತಿನಿಧಿಗಳ ಮೂಲಕ ನಡೆಸಲು ಅವಕಾಶವಿದೆ. ಹೀಗಿದ್ದರೂ ಸಿಇಒ ಇಲಾಖೆಯ ಸಚಿವರ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ಈ ಮೊದಲು ಹಲವು ಬಾರಿ ಜಿಪಂ ಸಿಇಒ ಅವರನ್ನು ಭೇಟಿ ಮಾಡಿದ್ದ ನಿಯೋಗ ಸಂಬಂಧಪಟ್ಟ ಪತ್ರ ರವಾನಿಸಿದರೂ ಜನಪ್ರತಿನಿಧಿಗಳಿಗೆ ನೀಡಲು ಆಗುವುದಿಲ್ಲ ಎಂದು ಸಿಇಒ ತಿಳಿಸಿದ್ದಾರೆ. ಇದು ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಜಿಪಂ ಸಿಇಒ ತಮಗೆ ಗೌರವ ನೀಡುತ್ತಿಲ್ಲ, ತಾವು ಕಾಮಗಾರಿ ನೀಡುವಂತೆ ನೀಡಿದ ಪತ್ರಗಳಿಗೆ ಬೆಲೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಮನೆಗೆ ಹೊರಟಿದ್ದ ಸಿಇಒ ಅವರ ಕಾರಿಗೆ ಕಾಂಗ್ರೆಸ್ ನಾಯಕರು ಅಡ್ಡ ಹಾಕಿದ್ದರು. ಈ ವೇಳೆ ಡಿವೈಎಸ್‌ಪಿ ನೇತೃತ್ವದ ಪೊಲೀಸ್ ಪಡೆ ಜಿಪಂ ಸಿಇಒ ರಕ್ಷಣೆ ನೀಡಿ, ಪರಿಸ್ಥಿತಿ ನಿಭಾಯಿಸಿದರು. - - -