ಮಾಜಿ ಶಾಸಕ ಆರ್.ನರೇಂದ್ರಗೆ ಭರ್ಜರಿ ಜಯ

| Published : May 15 2025, 01:39 AM IST

ಸಾರಾಂಶ

ಹನೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಭಾಗವಹಿಸಲು ಆಗಮಿಸಿರುವ ಮಾಜಿ ಶಾಸಕ ಆರ್‌.ನರೇಂದ್ರ.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಮಾಜಿ ಶಾಸಕ ಹಾಗೂ ಹಾಲಿ ನಿರ್ದೇಶಕ ಆರ್. ನರೇಂದ್ರ ಅವರು ಭರ್ಜರಿ ಜಯಗಳಿಸುವುದರ ಮೂಲಕ ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ ಅವರಿಗೆ ಮುಖಭಂಗ ಮಾಡಿದ್ದಾರೆ.

ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಜಿದ್ದಾಜಿದ್ದಿನಿಂದ ಮತ ಭರ್ಜರಿ ಮತ ಪ್ರಚಾರ ನಡೆಸಿದ್ದರು. ಹಾಲಿ ನಿರ್ದೇಶಕ ಆರ್.ನರೇಂದ್ರರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಹಾಲಿ ಶಾಸಕ ಎಂ.ಆರ್.ಮಂಜುನಾಥ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಬಿಜೆಪಿ ಮುಖಂಡ ನಿಶಾಂತ್ ಹಗಲಿರುಳು ಶ್ರಮಿಸಿದ್ದರು. ಆದರೆ ಮತದಾರ ಇವರೆಲ್ಲರನ್ನು ತಿರಸ್ಕರಿಸಿ ಮಾಜಿ ಶಾಸಕ ಆರ್.ನರೇಂದ್ರ ಅವರ ಕೈ ಬಲಪಡಿಸುವ ಮೂಲಕ ಇದು ಮತ್ತೊಮ್ಮೆ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದಲ್ಲಿ 274 ಮತದಾರರಿದ್ದು 270 ಮತದಾರರು ಮತ ಚಲಾವಣೆ ಮಾಡಿದ್ದರು. ಈ ಪೈಕಿ ಹಾಲಿ ನಿರ್ದೇಶಕ ಆರ್ ನರೇಂದ್ರ 171, ಮೈತ್ರಿ ಪಕ್ಷದ ಅಭ್ಯರ್ಥಿ ಎಸ್ ಗಿರೀಶ್ 97 ಮತಗಳನ್ನು ಪಡೆದು ಆರ್ ನರೇಂದ್ರ ವಿರುದ್ಧ ಗಿರೀಶ್ ಎರಡನೇ ಸ್ಥಾನ ಪಡೆದು ಸೋಲು ಅನುಭವಿಸಿದ್ದಾರೆ. ಇಬ್ಬರು ಮತದಾರರು ಮತ ಚಲಾವಣೆ ಮಾಡುವಾಗ ಹೆಬ್ಬೆಟ್ಟು ಒತ್ತಿರುವುದರಿಂದ ಎರಡು ಮತಗಳು ತಿರಸ್ಕೃತಗೊಂಡಿದೆ.

ಮಾತಿನ ಚಕಮಕಿ ವಾಗ್ವಾದ:

ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ಬೆಳಗ್ಗೆ 10 ಗಂಟೆಯಿಂದ ಮತ ಚಲಾವಣೆ ಪ್ರಾರಂಭವಾದಾಗ ಮೈತ್ರಿ ಪಕ್ಷದ ಅಭ್ಯರ್ಥಿ ಗಿರೀಶ್ ಮತಗಟ್ಟೆಯ ಸಮೀಪವೇ ಮತದಾರರನ್ನು ಒಲೈಕೆ ಮಾಡುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಮಾಜಿ ಶಾಸಕ ಆರ್.ನರೇಂದ್ರ ಅಭ್ಯರ್ಥಿಯಾದವರು ಮತಗಟ್ಟೆಯ ಬಳಿ ಮತ ಕೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಚುನಾವಣಾ ಅಧಿಕಾರಿಯನ್ನು ಪ್ರಶ್ನೆ ಮಾಡಿದರು. ತದನಂತರ ಪರಿಸ್ಥಿತಿ ಮಿತಿ ಮೀರುತ್ತಿದ್ದಂತೆ ಇನ್ಸ್‌ಪೆಕ್ಟರ್ ಆನಂದ್ ಮೂರ್ತಿ ಸಮಾಧಾನಪಡಿಸಿ ಎಲ್ಲರನ್ನು 100 ಮೀಟರ್ ಅಂತರದಿಂದ ಹೊರ ಕಳುಹಿಸಿದರು.

ಭಾರಿ ಪೊಲೀಸ್ ಬಿಗಿ ಪಹರೆ:

ಚುನಾವಣೆ ರಾಜಕೀಯ ಜಿದ್ದಾಜಿದ್ದಿನಿಂದ ಕೂಡಿರುವುದನ್ನು ಮನಗಂಡ ಇನ್ಸ್‌ಪೆಕ್ಟರ್ ಆನಂದ್ ಮೂರ್ತಿ ನೇತೃತ್ವದಲ್ಲಿ ರಾಮಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಚಿಕ್ಕರಾಜ ಶೆಟ್ಟಿ, ಮೂವರು ಸಬ್ ಇನ್ಸ್‌ಪೆಕ್ಟರ್ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ ಮಾಡಿ ಚುನಾವಣೆ ಅಚ್ಚುಕಟ್ಟಾಗಿ ನಡೆಯುವಂತೆ ಯಶಸ್ವಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.ಏಕ ಪಕ್ಷೀಯ ಮೈತ್ರಿ:

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಒಬ್ಬರೇ ನಾಯಕರು. ಆದರೆ ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಬಿಜೆಪಿ ಮುಖಂಡರಾದ ಡಾ.ದತ್ತೇಶ್ ಕುಮಾರ್, ನಿಶಾಂತ್, ವೆಂಕಟೇಶ್ ಅವರ ನಾಲ್ಕು ಬಣಗಳಿವೆ. ಆದರೆ ಏಕ ಪಕ್ಷಿಯವಾಗಿ ಡಾ.ದತ್ತೇಶ್ ಕುಮಾರ್ ನಿಶಾಂತ್ ಮಾತ್ರ ಈ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು. ಉಳಿದಂತೆ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಜನಧ್ವನಿ ವೆಂಕಟೇಶ್ ಚುನಾವಣೆಯ‌ ಯಾವುದೇ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಇದು ಸಹ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಶತಾಯುಷಿ ಅಜ್ಜಿ ಮತದಾನ:

ಸಾಲಗಾರರಲ್ಲದ ಕ್ಷೇತ್ರದಿಂದ ಬೆಳತ್ತೂರು ಗ್ರಾಮದ ಅಂಗವಿಕಲ 70 ವರ್ಷದ ರಾಜಮ್ಮ, ಗೂಳ್ಯ ಗ್ರಾಮದ 104 ವರ್ಷದ ಲಿಂಗರಾಜಮ್ಮ ಮತ ಚಲಾಯಿಸುವ ಮೂಲಕ ಗಮನ ಸೆಳೆದರು. ಸತತವಾಗಿ ಕಳೆದ ಮೂರು ಅವಧಿಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಜಿದ್ದಾಜಿದ್ದಿಯ ನಡುವೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ನರೇಂದ್ರ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಮುಖಂಡರಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ರ್ ಕಾರ್ಯಕರ್ತರಿಂದ ಸಂಭ್ರಮಾಚರಣೆ:

ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರಲ್ಲದ ಕ್ಷೇತ್ರದಿಂದ ಮಾಜಿ ಶಾಸಕ ಆರ್ ನರೇಂದ್ರ, ಪಕ್ಷದ ಮುಖಂಡರು, ಕಾರ್ಯಕರ್ತರು ರೈತ ಬಾಂಧವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಸಾಲಗಾರರ ಕ್ಷೇತ್ರದ ಶಾಂತಿಯುತ ಮತದಾನ:

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮೂರು ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಸಾಲಾಗಾರರ ಕ್ಷೇತ್ರಕ್ಕೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ಭಾರಿ ಪೊಲೀಸ್ ಬಿಗಿ ಪಹರೆಯಲ್ಲಿ ನಡೆಯಿತು.