ಸಾರಾಂಶ
ಸೈನಿಕ ಎಂಬ ಮೆಸ್ ನಡೆಸುತ್ತಿರುವ ರಾಮಪ್ಪನ ಮೇಲೆ ಅಮಾನವೀಯವಾಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಬರೀ ಎಎಸೈ ಹಾಗೂ ಕಾನಸ್ಟೇಬಲ್ ಅಮಾನತಾಗಿದ್ದು, ಪ್ರಕರಣದಲ್ಲಿ ಸಿಪಿಐ ಕೈಡವಾಡವೂ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಧಾರವಾಡ:
ಕಳೆದ ಸೆ. 28ರ ರಾತ್ರಿ ನಡೆದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಉಪ ನಗರ ಠಾಣೆ ಇನ್‌ಸ್ಪೆಕ್ಟರ್ ಮೇಲೆ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಮಾಜಿ ಸೈನಿಕರು ಕರ್ನಾಟಕ ಕಾನೂನು ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿದರು.ಕೋರ್ಟ್ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆ ಮಾಡಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನೂರಾರು ಮಾಜಿ ಸೈನಿಕರು ಹಾಗೂ ಧಾರವಾಡದ ವಿವಿಧ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಪೊಲೀಸರ ಅಮಾನವೀಯ ಕೃತ್ಯ ಖಂಡಿಸಿ ಘೋಷಣೆ ಕೂಗಿದರು.
ಸೈನಿಕ ಎಂಬ ಮೆಸ್ ನಡೆಸುತ್ತಿರುವ ರಾಮಪ್ಪನ ಮೇಲೆ ಅಮಾನವೀಯವಾಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಬರೀ ಎಎಸೈ ಹಾಗೂ ಕಾನಸ್ಟೇಬಲ್ ಅಮಾನತಾಗಿದ್ದು, ಪ್ರಕರಣದಲ್ಲಿ ಸಿಪಿಐ ಕೈಡವಾಡವೂ ಇದೆ. ಘಟನೆ ನಡೆದಾಗ ಸ್ಥಳಕ್ಕೆ ಆಗಮಿಸಿದ ಇನ್‌ಸ್ಪೆಕ್ಟರ್ ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ರಾಮಪ್ಪನನ್ನು ಆಸ್ಪತ್ರೆಗೆ ಕರದೊಯ್ಯಲು ಅವಕಾಶ ನೀಡದೇ ಅಮಾನವೀಯತೆ ಮರೆತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಅವಧಿ ಮುಗಿದ ನಂತರವೂ ಮೆಸ್ ಆರಂಭಿಸಿದ್ದಕ್ಕೆ ನೋಟಿಸ್ ಜಾರಿ ಮಾಡಬೇಕೆ ಹೊರತು ದೌರ್ಜನ್ಯ ಮಾಡಬೇಕಾ? ಬರೀ ರಾಮಪ್ಪ ಮಾತ್ರವಲ್ಲದೇ ಅವರ ಸಂಬಂಧಿ ಬಾಲಕನ ಮೇಲೂ ಹಲ್ಲೆಯಾಗಿದೆ. ಜತೆಗೆ ಸಿಸಿ ಟಿವಿ ಕ್ಯಾಮೆರಾ ಮತ್ತು ಡಿವಿಆರ್ ಹಾಗೂ ನಾಲ್ಕು ಮೊಬೈಲ್ ಸಹ ಪೊಲೀಸರು ವಶಕ್ಕೆ ಪಡೆದಿರುವುದು ಏತಕ್ಕೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಹಲ್ಲೆಗೊಳಗಾದ ರಾಮಪ್ಪ ಕಾನೂನು ವಿದ್ಯಾರ್ಥಿ. ಜತೆಗೆ ಮಾಜಿ ಸೈನಿಕರು ಹೌದು. ಪೊಲೀಸರು ನಡೆಸಿದ ದೌರ್ಜನ್ಯ ಗಂಭೀರ ಅಪರಾಧವಾಗಿದ್ದು, ಇನ್‌ಸ್ಪೆಕ್ಟರ್ ಮೇಲೂ ಕ್ರಮವಾಗಲಿ ಎಂದು ಆಗ್ರಹಿಸಲಾಯಿತು.
ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜುನಾಥ ಹೊಂಗಲದ ಹಾಗೂ ಹಲ್ಲೆಗೊಳಗಾದ ರಾಮಪ್ಪನ ಪತ್ನಿ, ತಾಯಿ ಹಾಗೂ ಮಾಜಿ ಸೈನಿಕರು, ವಿದ್ಯಾರ್ಥಿಗಳಿದ್ದರು.