ಸಾರಾಂಶ
ಹಾರ್ಡವರ್ಕ್ ಬದಲಾಗಿ ವಿದ್ಯಾರ್ಥಿಗಳು ಸ್ಮಾರ್ಟ್ ವರ್ಕ್ ಮಾಡುವುದು ಲೇಸು. ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ಹಾಗೂ ಆತ್ಮವಿಶ್ವಾಸ ಇರಬೇಕು ಎಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಹೇಳಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ವಿದ್ಯಾರ್ಥಿಗಳು ಅಧ್ಯಯನ ನಿರತರಾದಾಗ ಬೇಸರ ಹಾಗೂ ಜಡತ್ವದಿಂದ ಮುಕ್ತರಾಗುತ್ತಾರೆ. ಆಳವಾದ ಅಧ್ಯಯನದಿಂದ ಮಾತ್ರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ತಾಲೂಕಿನ ಉಪ್ಪಿನ ಬೆಟಗೇರಿ ಎಂ.ಜಿ. ಹಳವೂರ ಉರ್ದು ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷಾಪೂರ್ವ ಸಿದ್ಧತೆ ಹಾಗೂ ಅಧ್ಯಯನದಲ್ಲಿ ಏಕಾಗ್ರತೆ’ ಕುರಿತು ಉಪನ್ಯಾಸ ಹಾಗೂ ಸಂವಾದ ಉದ್ಘಾಟಿಸಿ ಮಾತನಾಡಿದರು.
ವಿನಾಕಾರಣ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯ ಹಾಗೂ ಉದ್ವೇಗ ಹೊಂದಬಾರರು. ಅದು ವಿದ್ಯಾರ್ಥಿಯಲ್ಲಿಯ ಶಕ್ತಿಯನ್ನು ಕುಂಠಿಸುತ್ತದೆ. ಹಾರ್ಡವರ್ಕ್ ಬದಲಾಗಿ ವಿದ್ಯಾರ್ಥಿಗಳು ಸ್ಮಾರ್ಟ್ ವರ್ಕ್ ಮಾಡುವುದು ಲೇಸು. ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ಹಾಗೂ ಆತ್ಮವಿಶ್ವಾಸ ಇರಬೇಕು. ಪೂರ್ವಸಿದ್ಧತೆ ಚೆನ್ನಾಗಿದ್ದರೆ ಮಾತ್ರ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯ. ಪುನರಾವರ್ತನೆಯಿಂದ ವಿಷಯದ ಗ್ರಹಿಕೆ ಹೆಚ್ಚುವುದು ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂಡು ಅಧ್ಯಯನ ಮಾಡಬೇಕು. ಸಾಧನೆ ಮಾಡಲು ಛಲ ಮತ್ತು ಆತ್ಮವಿಶ್ವಾಸ ಮುಖ್ಯ. ಚಂಚಲ ಚಿತ್ತವಾದ ಮನಸ್ಸನ್ನು ಒಮ್ಮುಖಗೊಳಿಸಿ ಅಧ್ಯಯನ ನಿರತರಾಗಬೇಕು. ನಿಮಗಾಗಿ ಏನೆಲ್ಲಾ ತ್ಯಾಗ ಮಾಡುತ್ತಿರುವ ಶಾಲಾ ಆಡಳಿತ ಮಂಡಳಿ, ಗುರುಗಳು ಹಾಗೂ ತಂದೆ-ತಾಯಿಗಳ ಶ್ರಮ ಸಾರ್ಥಕವಾಗುವಂತೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಆಝಾದ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅಬ್ದುಲ್ ರಹಮಾನ್ ಜೋರಮ್ಮನವರ, ಸಂಘದ ಶಿಕ್ಷಣ ಮಂಟಪ ಗ್ರಾಮೀಣ ಮಕ್ಕಳಿಗಾಗಿ ಆಯೋಜಿಸಿದ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಕ್ರಮ ಅಭಿನಂದನೀಯ. ನಿರ್ದಿಷ್ಟ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಯಶಸ್ಸು ನಿಮ್ಮದಾಗಿಸಿಕೊಳ್ಳಬೇಕು ಎಂದರು. ಸೊಸೈಟಿಯ ಪದಾಧಿಕಾರಿ ಅಜೀಂ ಕರಡಿಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಡೈಟ್ ನಿವೃತ್ತ ಶಿಕ್ಷಕ ಜಮೀಲ್ ಅಹಮ್ಮದ ದಿಲಶಾದ್, ಪತ್ರಕರ್ತ ಚನಬಸಪ್ಪ ಲಗಮಣ್ಣವರ, ಪ್ರೊ. ವೀರನಗೌಡ ಮರಿಗೌಡ್ರ, ಮಹಮ್ಮದ ಮುನ್ನಾಸಾಹೇಬ ಇದ್ದರು.ಮುಖ್ಯಾಧ್ಯಾಪಕ ವೈ.ಎಚ್. ಜೋರಮ್ಮನವರ ಸ್ವಾಗತಿಸಿದರು. ಸಂಚಾಲಕ ವೀರಣ್ಣ ಒಡ್ಡೀಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎ. ಕಿಲ್ಲೇದಾರ ನಿರೂಪಿಸಿದರು. ಎಂ.ಎಂ. ಕೊಹಲಿ ವಂದಿಸಿದರು.