ಪ್ರಸ್ತುತ ಎ1 ಬ್ಲಾಕ್ ಹೊರತುಪಡಿಸಿ ಉಳಿದ ಮೂರು ಬ್ಲಾಕ್‌ಗಳಲ್ಲಿ ಉತ್ಖನನ ಮುಂದುವರಿದಿದ್ದು, ಸುತ್ತಲಿನ ನಾಲ್ಕು ಗೋಡೆಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ​

​ಗದಗ: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 17ನೇ ದಿನವಾದ ಬುಧವಾರವೂ ಉತ್ಖನನ ಕಾರ್ಯ ಮುಂದುವರಿದಿದ್ದು, ಯಾವುದೇ ಪ್ರಾಚ್ಯಾವಶೇಷಗಳು ಪತ್ತೆಯಾಗಿಲ್ಲ. ಕಳೆದ ಕೆಲವು ದಿನಗಳಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಾಚೀನ ಅವಶೇಷಗಳು ಪತ್ತೆಯಾಗದ ಹಿನ್ನೆಲೆ, ಸದ್ಯಕ್ಕೆ ಆಳವಾದ ಉತ್ಖನನ ಕಾರ್ಯವನ್ನು ಇಲಾಖೆ ಸ್ಥಗಿತಗೊಳಿಸಿದೆ.

ಉತ್ಖನನ ನಡೆಯುತ್ತಿರುವ ಪ್ರದೇಶದ ಎ1 ಬ್ಲಾಕ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಕಾರ್ಮಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಬ್ಲಾಕ್‌ನಲ್ಲಿ ಸದ್ಯಕ್ಕೆ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆಳಕ್ಕೆ ಗುಂಡಿ ತೋಡುವುದನ್ನು ನಿಲ್ಲಿಸಿರುವ ಪುರಾತತ್ವ ಇಲಾಖೆಯ ಮಾರ್ಗದರ್ಶನದಲ್ಲಿ, ಕಾರ್ಮಿಕರು ಈಗ ಬ್ಲಾಕ್‌ಗಳ ಮಧ್ಯದ ಗೋಡೆಗಳನ್ನು ಅಗೆಯುವತ್ತ ಗಮನ ಹರಿಸಿದ್ದಾರೆ.

ಪ್ರಸ್ತುತ ಎ1 ಬ್ಲಾಕ್ ಹೊರತುಪಡಿಸಿ ಉಳಿದ ಮೂರು ಬ್ಲಾಕ್‌ಗಳಲ್ಲಿ ಉತ್ಖನನ ಮುಂದುವರಿದಿದ್ದು, ಸುತ್ತಲಿನ ನಾಲ್ಕು ಗೋಡೆಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ​ಪ್ರಾಚೀನ ಇತಿಹಾಸದ ಕುರುಹುಗಳನ್ನು ಹುಡುಕುವ ಈ ಕಾರ್ಯಾಚರಣೆ ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಮತ್ತು ಅವಶೇಷಗಳ ಲಭ್ಯತೆ ಕ್ಷೀಣಿಸಿರುವುದು ಸಂಶೋಧಕರಲ್ಲಿ ಕುತೂಹಲ ಮತ್ತು ಸವಾಲನ್ನು ಏಕಕಾಲಕ್ಕೆ ಮೂಡಿಸಿದೆ.

11ರಂದು ಕಾಯಕ ಶರಣರ ಜಯಂತಿ ಅರ್ಥಪೂರ್ಣವಾಗಿ ಆಯೋಜಿಸಿ

ಗದಗ: ಕಾಯಕ ಶರಣರ ಜಯಂತಿಯನ್ನು ಫೆ. 11ರಂದು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕಾಯಕ ಶರಣರ ಜಯಂತಿ ಕುರಿತು ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಮಟ್ಟದಲ್ಲಿಯೂ ಕಾಯಕ ಶರಣರ ಜಯಂತಿಯನ್ನು ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸಬೇಕು. ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾಯಕ ಶರಣರ ಕುರಿತು ಅಧ್ಯಯನ ಮಾಡಿದವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಒಟ್ಟಾರೆಯಾಗಿ ಕಾಯಕ ಶರಣರ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಬೇಕು ಎಂದರು.ಎಸ್.ಎನ್. ಬಳ್ಳಾರಿ, ಡಿ.ಜಿ. ಜೋಗಣ್ಣವರ, ರಮೇಶ ಕೊಳೂರ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿ, ವಂದಿಸಿದರು.