ಕನ್ನಡಪ್ರಭ ವಾರ್ತೆ ಮೈಸೂರು
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುತ್ತದೆ ಎಂಬುದು ನನಗೆ ಮೊದಲೇ ತಿಳಿದಿತ್ತು. ಆದರೆ, ನಾನು ವಿಚಲಿತನಾಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಅಡ್ಡ ಮತದಾನ ಮಾಡಿದ್ದಾರೆಂಬ ಮಾಹಿತಿ ನನಗಿದೆ. ನಾಲ್ವರು ಶಾಸಕರು ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕಿದ್ದಾರೆ. ಪಕ್ಷ ಬಿಡುವ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ. ಆ ವಿಷಯವೂ ನನಗೆ ಗೊತ್ತಿದೆ. ಹೋಗುವವರು ಹೋಗಲಿ, ಹೊಸ ನಾಯಕತ್ವವನ್ನು ತರುವುದು ನಮಗೆ ಗೊತ್ತಿದೆ ಎಂದು ಹೇಳಿದರು.
ಅತಿಯಾದ ನಂಬಿಕೆ, ವಿಶ್ವಾಸವೇ ಈ ಸೋಲಿನ ಕಾರಣ. ಇದರಿಂದ ಹೊರಬಂದು ಪಕ್ಷ ಕಟ್ಟುವ ಶಕ್ತಿ ನಮಗಿದೆ. ನನಗೆ ಎಲ್ಲವೂ ಗೊತ್ತಿದ್ದೇ ನಾನು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಯಾರ ಯಾರ ಆತ್ಮಸಾಕ್ಷಿ ಹೇಗೆಲ್ಲ ವರ್ತನೆ ಮಾಡುತ್ತದೆ ಎಂಬುದನ್ನು ಪರೀಕ್ಷೆ ಮಾಡಲು ಪಕ್ಷದ ಅಭ್ಯರ್ಥಿಯನ್ನು ನಾನು ಕಣಕ್ಕೆ ಇಳಿಸಬೇಕಾಯಿತು. ಎಲ್ಲವೂ ನಾನು ಅಂದುಕೊಂಡಂತೆ ಆಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬುದು ನಮಗೆ ತಿಳಿದಿದೆ ಎಂದು ಮಾರ್ಮಿಕವಾಗಿ ನುಡಿದರು.ಅಡ್ಡ ಮತದಾನ ಮಾಡಿದವರ ಬಗ್ಗೆ ಚರ್ಚೆ ಮಾಡುತ್ತೇನೆ. ಅವರ ವಿರುದ್ಧ ಯಾವಾಗ ಏನು ಕ್ರಮ ಜರುಗಿಸಬೇಕು ಅದನ್ನು ಮಾಡಿಯೇ ಮಾಡುತ್ತೇವೆ. ಇಂತಹ ವಂಚನೆ, ಮೋಸಗಳು ನನಗೆ ಮತ್ತು ನಮ್ಮ ಪಕ್ಷಕ್ಕೆ ಹೊಸದಲ್ಲ. ಎಷ್ಟೋ ಸಲ ಎದುರಿಸಿ ಅದರಿಂದ ಆಚೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಜೆನ್ ಜಿ ತಲೆಮಾರಿನ ಯುವಜನರಿಗೆ ಹೆಚ್ಚಿನ ಅವಕಾಶ ನೀಡುತ್ತೇವೆ. ಹೊಸ ನಾಯಕತ್ವವನ್ನು ಬೆಳೆಸುವುದು ನಮಗೆ ಗೊತ್ತಿದೆ. ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿರ್ಧರಿಸಿರುವುದಾಗಿ ಅವರು ಘೋಷಿಸಿದರು.
ಶಾಸಕ ಜಿ.ಟಿ. ದೇವೇಗೌಡ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ತೀವ್ರ ಅಸಹನೆ ವ್ಯಕ್ತಪಡಿಸಿದ ಅವರು, ನನ್ನ ಮುಂದೆ ಅವರ ಹೆಸರು ಎತ್ತಬೇಡಿ ಎಂದು ಎಂದು ನೇರವಾಗಿಯೇ ಹೇಳಿದರು.
ಕಳೆದ ಒಂದೂವರೆ ವರ್ಷದಿಂದಲೂ ಅವರ ಬಗ್ಗೆ ನಾನು ಚಕಾರ ಎತ್ತಿಲ್ಲ. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೂಡ ಅವರ ಹೆಸರನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದರು.
ಅಂತಿಮ ನಿರ್ಧಾರ ನನ್ನದೇ:ನಮ್ಮ ಪಕ್ಷದಲ್ಲಿ ಕೆಲವರು ಆ ವ್ಯಕ್ತಿಯನ್ನು ಸರಿಪಡಿಸುವ ಬಗ್ಗೆ ಪ್ರಯತ್ನ ಮಾಡುತ್ತಿದ್ದರು. ಅದು ಅವರ ವೈಯಕ್ತಿಕ ವಿಚಾರ. ಆದರೆ, ಪಕ್ಷಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ನಾನೇ. ಈ ಬಗ್ಗೆ ನಾನೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈ ವ್ಯಕ್ತಿ ಏನೆಲ್ಲಾ ಮಾಡಿದ್ದಾರೆ ಎಂದು ನನಗೆ ಗೊತ್ತು. ಮೂರು ಬಾರಿ ನನಗೆ ಇವರಿಂದ ಕಹಿ ಅನುಭವ ಆಗಿದೆ. ಯಾರು ಎಷ್ಟೇ ಒತ್ತಡ ಹಾಕಿದರೂ ನಾನು ನನ್ನ ನಿರ್ಧಾರವನ್ನು ಕಠಿಣವಾಗಿ ಕೈಗೊಳ್ಳುತ್ತೇನೆ. ಇಲ್ಲಿ ನನ್ನ ವೈಯಕ್ತಿಕ ವಿಚಾರ ಮುಖ್ಯವಲ್ಲ, ಪಕ್ಷವನ್ನು ಉಳಿಸಲು ಕೆಲ ಕಠಿಣ ನಿರ್ಧಾರ ಮಾಡಲೇಬೇಕಿದೆ ಎಂದು ಅವರು ಉತ್ತರಿಸಿದರು.ಕಾರ್ಯಕರ್ತರು ಹಗಲಿರುಳು ಕಷ್ಟಪಟ್ಟು ಇವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದಾರೆ. ಇವರು ನೋಡಿದರೆ ತಮ್ಮ ಸ್ವಾರ್ಥ ನೋಡಿಕೊಂಡಿದ್ದಾರೆ. ಎಚ್.ಡಿ. ದೇವೇಗೌಡರು ಕಳೆದ 60 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಕಷ್ಟಪಟ್ಟು ಈ ಪಕ್ಷವನ್ನು ಕಟ್ಟಿದ್ದಾರೆ. ಕೆಲವನ್ನು ಅತಿಯಾಗಿ ನಂಬಿ ಈ ಪರಿಸ್ಥಿತಿಗೆ ತಂದಿದ್ದಾರೆ. ಅವರ ನಂಬಿಕೆಯ ದುರುಪಯೋಗವಾಗಿದೆ. ಅವರು ಅಧಿಕಾರದಲ್ಲಿ ಇದ್ದಿದ್ದು ಅತ್ಯಲ್ಪ ಅವಧಿ. ಅವರ ಬಳುವಳಿ ನನಗೂ ಬಂದಿದೆ ಎಂದು ಕುಮಾರಸ್ವಾಮಿ ಹೇಳಿದರು.
ಅಡ್ಡ ಮತದಾನ ಮಾಡಿರುವ ವ್ಯಕ್ತಿಗಳದ್ದು ಮುಗಿದು ಹೋದ ಕಥೆ. ಮೈಸೂರು ಜಿಲ್ಲೆಯ ಶಾಸಕರು ಒಂದು ಕಾಲಲ್ಲ, ಎರಡು ಕಾಲನ್ನು ಹೊರಗಡೆ ಇಟ್ಟಿದ್ದಾರೆ. ಅವರ ಬಗ್ಗೆ ನಾನು ಈ ಹಿಂದೆ ಏನು ಹೇಳಿದೆನೋ ಅದೇ ಅಂತಿಮ. ಅವರ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟ. ಈ ವಿಚಾರದಲ್ಲಿ ಎಚ್.ಡಿ.ದೇವೇಗೌಡರು ಹೇಳಿದರು ಕೂಡ ಪಕ್ಷದ ಹಿತದೃಷ್ಟಿಯಿಂದ ನನ್ನ ನಿಲುವು ಬದಲಾಗುವುದಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಗಳನ್ನು ಅಂತಿಮ ನಿರ್ಣಯ ಮಾಡುವುದು ನಾನೇ. ಇದರ ಬಗ್ಗೆ ಯಾವ ಗೊಂದಲವೂ ಬೇಡ. ಈ ವ್ಯಕ್ತಿ ಯಾವ್ಯಾವಾಗ ಯಾವ್ಯಾವ ರೀತಿಯ ಆಟ ಕಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರ ಎಲ್ಲಾ ಪೂರ್ವಾಪರ ಗೊತ್ತಿದೆ. ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ಅದರ ಬಗ್ಗೆ ನನ್ನ ಬಳಿ ಚರ್ಚೆ ಮಾಡಲೇಬೇಡಿ. ದೇವೇಗೌಡರಿಗೆ ಅವರ ಮೇಲೆ ಪ್ರೀತಿ ವ್ಯಾಮೋಹ ಇರುವುದು ಸತ್ಯ. ಆ ವ್ಯಾಮೋಹವನ್ನೇ ಆ ವ್ಯಕ್ತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಂದೆ ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಅವರು ಕಟುವಾಗಿ ಹೇಳಿದರು.ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯ ಬಗ್ಗೆ ರಬ್ಬಿಶ್ ಎಂದು ಹೇಳಿರುವ ಬಗ್ಗೆ ಲೇವಡಿ ಮಾಡಿದ ಕೇಂದ್ರ ಸಚಿವರು. ನಾನು ಹೇಳಿದ್ದು ಹಾಗಿರಲಿ, ನಾನು ಹೇಳಿದ್ದನ್ನೇ ಜನರೂ ಹೇಳುತ್ತಿದ್ದಾರಲ್ಲ, ಅದಕ್ಕೆ ಏನು ಹೇಳುತ್ತೀರಿ? ಅದರಲ್ಲಿ ನಾನೇನು ತಪ್ಪು ಹೇಳಿದ್ದೇನೆ? ಇದ್ದಿದ್ದನ್ನು ಹೇಳಿದ್ದೇನೆ ಅಲ್ಲವೇ? ಎಂದು ಪ್ರಶ್ನಿಸಿದರು.
ಕೇಂದ್ರ ರಾಜಕಾರಣದ ಕುರಿತು ಮಾರ್ಮಿಕವಾಗಿ ಉತ್ತರಿಸಿದ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಇರುವುದು ತಾತ್ಕಾಲಿಕ. ನನಗೆ ರಾಜ್ಯವೇ ಶಾಶ್ವತ. ರಾಜ್ಯ ರಾಜಕಾರಣಕ್ಕೆ ಹೊಸದಾಗಿ ನಾನು ಬರಬೇಕಾಗಿಲ್ಲ. ನಮ್ಮ ಪಕ್ಷಕ್ಕೆ ನಾನೇ ಅಧ್ಯಕ್ಷ ಅಲ್ಲವೇ ಎಂದು ಹೇಳಿದರು.ಬಿಡದಿ ಟೌನ್ ಶಿಫ್ ಕುಮಾರಸ್ವಾಮಿ ಕೂಸು ಅಂತಾರೆ. ನೈಸ್ ರಸ್ತೆ ದೇವೇಗೌಡರ ಕೂಸು ಎನ್ನುತ್ತಿದ್ದರು. ಬಿಡದಿಯಲ್ಲಿ ನಾನು ರೆಡ್ ಜೋನ್ ತೆಗೆದು ಹಾಕಲಿಲ್ಲ ಅಂತಾರೆ. ಒಂದು ವೇಳೆ ನಾನು ರೆಡ್ ಜೋನ್ ತೆಗೆದಿದ್ದರೆ ಇವತ್ತು ಒಂದು ಚೂರು ಭೂಮಿಯು ರೈತರ ಕೈಯಲ್ಲಿ ಇರುತ್ತಿರಲಿಲ್ಲ. ನಾನೇನಾದರೂ ರಿಯಲ್ ಎಸ್ಟೇಟ್ ಮಾಫಿಯಾ ಪರ ಇದ್ದಿದ್ದರೆ ಇಷ್ಟೊತ್ತಿಗೆ ಭೂಮಿ ರೈತರಿಂದ ಹೋಗಿಬಿಡುತ್ತಿತ್ತು ಎಂದು ತಿಳಿದರು.
ಟೌನ್ ಶಿಪ್ ಯೋಜನೆನೆಗೆ ನನ್ನ ಕಾಲದಲ್ಲಿ ಡಿ.ಎಲ್. ಎಫ್ ಹಣ ಕಟ್ಟಿಲ್ಲ. ರಾಜ್ಯಪಾಲದ ಅವಧಿಯಲ್ಲಿ ಹಣ ಕಟ್ಟಿ ನಂತರ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. 2007 ಜುಯ 31ರಂದು ಬಿಡದಿ ಟೌನ್ ಶಿಪ್ ಬಗ್ಗೆ ಸಿದ್ದರಾಮಯ್ಯ ಅವರು ಸದನದಲ್ಲಿ ಏನು ಭಾಷಣ ಮಾಡಿದ್ದಾರೆ ಎಂಬುದನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪುಟಗಟ್ಟಲೆ ಮಾತನಾಡಿದ್ದಾರೆ, ಈ ಡಿಕೆಶಿ ಕೂಡ ಮಾತನಾಡಿದ್ದಾರೆ. ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರೂ ಮಾತನಾಡಿದ್ದಾರೆ. 2006-07ರಲ್ಲಿ ನಾನು ಸಿಎಂ ಆಗಿದ್ದಾಗ ಐದು ಟೌನ್ ಶಿಪ್ ಮಾಡಲು ನಿರ್ಧಾರ ಮಾಡಿದ್ದು ನಿಜ. ಎಲ್ಲರನ್ನೂ ಕರೆದು ಸಭೆ ಮಾಡಿ ಜನರ ಭಾವನೆಗೆ ಬೆಲೆ ಕೊಟ್ಟು ನಾನು ಅಂದು ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಟ್ಟೆ. ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಕೊಡಬಾರದು ಎಂದು ಆ ಯೋಜನೆಯನ್ನು ಅಲ್ಲಿಗೆ ಬಿಟ್ಟೆ. ರೈತರ ದನಿಯಾಗಿ ನನ್ನ ಹೋರಾಟ ನಾನು ಮಾಡುತ್ತೇನೆ. ಕಾನೂನು ವ್ಯಾಪ್ತಿಯಲ್ಲಿ ರೈತರಿಗೆ ಒಳ್ಳೆಯದು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.