ಪ್ಲಾಸ್ಟಿಕ್ ಗ್ಲಾಸ್‌ಗಳ ಅತಿಯಾದ ಬಳಕೆಯಿಂದ ಹೆಚ್ಚಿನ ತ್ಯಾಜ್ಯ ಸೃಷ್ಟಿ

| Published : Jun 27 2024, 01:08 AM IST

ಪ್ಲಾಸ್ಟಿಕ್ ಗ್ಲಾಸ್‌ಗಳ ಅತಿಯಾದ ಬಳಕೆಯಿಂದ ಹೆಚ್ಚಿನ ತ್ಯಾಜ್ಯ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಿತ್ಯವೂ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವೇ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಿತ್ಯವೂ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವೇ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ.

ಮದ್ಯ ಮಾರಾಟ ಹೆಚ್ಚಳದಿಂದಾಗಿ ದಿನೇ ದಿನೇ ಮದ್ಯಪ್ರಿಯರ ಸಂಖ್ಯೆಯೇನೋ ಹೆಚ್ಚಳವಾಗಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಆದರೆ, ಇದು ಮದ್ಯಪ್ರಿಯರ ಕುಟುಂಬಗಳಿಗೆ ಕಂಟಕ ಪ್ರಾಯವಾಗಿದ್ದರೆ, ಬಾರ್ ಅಂಗಡಿಗಳಿಂದ ಸೃಷ್ಟಿಯಾಗುತ್ತಿರುವ ತ್ಯಾಜ್ಯ ಇಡೀ ಸಮಾಜಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರದ ನಿಯಮಗಳ ಪ್ರಕಾರ ಕೆಲವೊಂದು ಬಾರ್‌ಗಳು ಕೇವಲ ಮದ್ಯ ಮಾರಾಟ ಮಾತ್ರ ಮಾಡಬೇಕು, ಆದರೆ, ಅಲ್ಲಿಯೇ ಕುಡಿಯಲು ಅವಕಾಶ ಕಲ್ಪಿಸುತ್ತಾರೆ. ಇದಕ್ಕಾಗಿ ಈಗ ಪ್ರತಿಯೊಂದು ಅಂಗಡಿಗಳು ಮೊರೆ ಹೋಗಿರುವುದು ಪ್ಲಾಸ್ಟಿಕ್ ಗ್ಲಾಸ್‌ಗಳಿಗೆ. ಇದರಿಂದಾಗಿ ನಿತ್ಯವೂ ಅತಿಯಾದ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇನ್ನು ರೆಸ್ಟೋರೆಂಟ್‌ಗಳಲ್ಲಿಯೂ ಪ್ಲಾಸ್ಟಿಕ್‌ ಗ್ಲಾಸ್‌ಗಳ ಬಳಕೆ ವಿಪರೀತ ಹೆಚ್ಚಳವಾಗಿರುವುದು ಸಮಸ್ಯೆಯನ್ನು ದುಪ್ಪಟ್ಟು ಮಾಡಿದೆ.

200ಕ್ಕೂ ಹೆಚ್ಚು ಅಂಗಡಿಗಳು

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 19 ಎಂಎಸ್ಐಎಲ್ ಸೇರಿದಂತೆ ವಿವಿ‍ಧ ಹಂತದ 200ಕ್ಕೂ ಹೆಚ್ಚು ಮದ್ಯ ಮಾರಾಟ ಅಂಗಡಿಗಳಿವೆ. ಪ್ರತಿಯೊಂದು ಅಂಗಡಿಯಿಂದ ಕನಿಷ್ಠ ದಿನಕ್ಕೆ 100 ಗ್ಲಾಸ್‌ ಬಳಕೆ ಮಾಡುವುದು ಸಾಮಾನ್ಯ. ಇದರಿಂದಾಗಿ ವ್ಯಾಪಕ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ನಿತ್ಯ ಗದಗ-ಬೆಟಗೇರಿ ಅವಳಿ ನಗರದಲ್ಲಿಯೇ ಒಂದು ಸಾವಿರಕ್ಕೂ ಹೆಚ್ಚು ಬಳಕೆಯಾದ ಗ್ಲಾಸ್‌ಗಳ ತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಇದರ ಸರಿಯಾದ ನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಅವಳಿ ನಗರದ ಚರಂಡಿಗಳೆಲ್ಲ ತ್ಯಾಜ್ಯ ಗ್ಲಾಸ್‌ಗಳಿಂದಲೇ ತುಂಬಿ ಹೋಗಿವೆ.

ಟೆಟ್ರಾ ಪ್ಯಾಕ್‌ಗಳು ಕಾರಣ

ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯಪ್ರಿಯರು ಕುಡಿಯಲು ಬಳಸುವ ಪ್ಲಾಸ್ಟಿಕ್ ಗ್ಲಾಸ್‌ಗಳೊಟ್ಟಿಗೆ, ನಿತ್ಯವೂ ಬಳಕೆಯಾಗುವ ಸಣ್ಣ ಸಣ್ಣ ಮದ್ಯ ಸಂಗ್ರಹಣೆ ಮಾಡುವ ಟೆಟ್ರಾ ಪ್ಯಾಕ್‌ಗಳಿಂದಲೂ ಕಸ ಉತ್ಪತ್ತಿಯಾಗುತ್ತಿದೆ. ಪ್ರತಿಯೊಂದು ಬಾರ್ ಅಕ್ಕಪಕ್ಕದಲ್ಲಿನ ಕಸದ ರಾಸಿಯಲ್ಲಿ ಟೆಟ್ರಾ ಪ್ಯಾಕ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದು, ಪರಿಸರ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ. ಹೆಚ್ಚಿನ ದರಕ್ಕೆ ಮಾರಾಟ

ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯಪ್ರಿಯರಿಗೆ ಸರ್ವೀಸ್ ಕೊಡುವ ಹಿನ್ನೆಲೆಯಲ್ಲಿ ಮದ್ಯವನ್ನು ಎಂಆರ್ ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಎಂಎಸ್ಐಎಲ್‌ಗಳಲ್ಲಿಯೇ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲ 19 ಎಂಎಸ್ಐಎಲ್‌ಗಳು ಇದಕ್ಕೆ ಹೊರತಾಗಿಲ್ಲ. ಅಲ್ಲಿಗೆ ಖರೀದಿ ಮಾಡಲು ಹೋದವರು ಪ್ರಶ್ನೆ ಮಾಡಿದರೆ, ನಾವು ಮಾರಾಟ ಮಾಡುವುದೇ ಹಿಂಗೆ, ನೀವು ಯಾರಿಗಾದರೂ ಹೇಳಿಕೊಳ್ಳಿ, ಅಬಕಾರಿ ಅಧಿಕಾರಿಗಳಾದರೂ ತಿಳಿಸಿ, ಸರ್ಕಾರಕ್ಕಾದರೂ ಹೇಳಿ. ನಾವು ಮಾರಾಟ ಮಾಡುವುದು ಮಾತ್ರ ಹೆಚ್ಚಿನ ದರಕ್ಕೆ ಎನ್ನುವ ಉಡಾಫೆ ಉತ್ತರ ನೀಡುವುದು ಜಿಲ್ಲೆಯಾದ್ಯಂತ ಸಾಮಾನ್ಯವಾಗಿದೆ.

ಅಗತ್ಯ ಕ್ರಮ

ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಅದಕ್ಕೆ ಕಡಿವಾಣ ಹಾಕುವುದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಎಂಎಸ್ಐಎಲ್‌ನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದರ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಲು ಇಲಾಖೆಯ ಕಾನೂನಿನಲ್ಲಿ ಅವಕಾಶವಿಲ್ಲ.

ಲಕ್ಷ್ಮೀನಾಯಕ ಅಬಕಾರಿ ಉಪಆಯುಕ್ತರು, ಗದಗ