ವಿವಿಧೆಡೆ ಅಬಕಾರಿ ದಾಳಿ: 4 ಪ್ರಕರಣ, 31 ಜನ ಬಂಧನ

| Published : Mar 22 2024, 01:01 AM IST

ಸಾರಾಂಶ

ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು. ಒಟ್ಟು 121.350 ಲೀಟರ್ ಮದ್ಯ, 40.420 ಲೀಟರ್ ಬಿಯರ್, 180 ಲೀಟರ್ ಸೇಂದಿ, 0.980 ಕೆ.ಜಿ ಗಾಂಜಾ ಹಾಗೂ 4 ವಾಹನ ಸೇರಿ 7,95,601 ರು. ಮೌಲ್ಯದ ವಸ್ತುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

ರಾಯಚೂರು: ಲೋಕಸಭಾ ಚುನಾವಣೆ ಹಿನ್ನೆಲೆ ರಾಯಚೂರು ಮತಕ್ಷೇತ್ರ ವ್ಯಾಪ್ತಿಯಲ್ಲಿ ಮಾ.16ರಿಂದ ಮಾ.20ರವರೆಗೆ ವಿವಿಧ ಅಬಕಾರಿ ಪ್ರಕರಣಗಳು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4-ಘೋರ, 23-15(ಎ), 4-ಬಿ.ಎಲ್.ಸಿ ಮತ್ತು 1-ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 31 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಒಟ್ಟು 121.350 ಲೀಟರ್ ಮದ್ಯ, 40.420 ಲೀಟರ್ ಬಿಯರ್, 180 ಲೀಟರ್ ಸೇಂದಿ, 0.980 ಕೆ.ಜಿ ಗಾಂಜಾ ಹಾಗೂ 4 ವಾಹನ ಸೇರಿ 7,95,601 ರು. ಮೌಲ್ಯದ ವಸ್ತುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

ಸಾರ್ವತ್ರಿಕ ಲೋಕಸಭೆ ಚುನಾವಣೆ-2024ರ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಬಕಾರಿ ಅಕ್ರಮಗಳು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರಾಯಚೂರು ಜಿಲ್ಲೆ ಹಾಗೂ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆ ರಾಯಚೂರು ರವರು ಅಬಕಾರಿ ಉಪ ಆಯುಕ್ತರು ರಾಯಚೂರು ಜಿಲ್ಲೆ ಇವರ ಆದೇಶದ ಮೇರೆಗೆ ದಾಳಿ ನಡೆಸಲಾಗುತ್ತಿದೆ. ವಲಯ ವ್ಯಾಪ್ತಿಯಲ್ಲಿ ದಾಬಾ/ಡಬ್ಬಿ ಅಂಗಡಿ/ಹೋಟೆಲ್‌ಗಳು ಹಾಗೂ ಸೇಂದಿ ಮತ್ತು ಕಳ್ಳಭಟ್ಟಿ ಕೇಂದ್ರಗಳ ಮೇಲೆ ದಾಳಿ ನಡೆಸಿರುತ್ತಾರೆ. ಅಲ್ಲದೇ ಸನ್ನದುಗಳನ್ನು ಕೂಡಾ ತಪಾಸಣೆ ಮಾಡಿ ಸನ್ನದು ಷರತ್ತುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸನ್ನದುದಾರರಿಗೆ ಸೂಚಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಅಧೀಕ್ಷಕರು ತಿಳಿಸಿದ್ದಾರೆ.