ಸಾರಾಂಶ
ಹಾವೇರಿ: `ಹಾವೇರಿ ರಾಕ್‌ಸ್ಟಾರ್’ `ಅನ್ನದಾತ’, ‘ಜನನಾಯಕ’, ‘ಘಟಸರ್ಪ’, `ಇತಿಹಾಸಕಾರ’, ‘ಮಿಡಿನಾಗರ’ ಸೇರಿದಂತೆ ಹತ್ತು ಹಲವು ಘಟಾನುಘಟಿಗಳು ಗತ್ತು ಗಮ್ಮತ್ತಿನೊಂದಿಗೆ ಆಖಾಡಕ್ಕೆ ಇಳಿದಿದ್ದವು. ಇವರನ್ನು ನೋಡಲೆಂದೇ ಸಾವಿರಾರು ಜನರು ಜಮಾಯಿಸಿದ್ದರು. ಅಖಾಡದಲ್ಲಿ ಇವರ ಓಟ ನೋಡುಗರನ್ನು ರೋಮಾಂಚನಗೊಳಿಸಿತು.
ಅಷ್ಟಕ್ಕೂ ಇವರು ಓಟಗಾರರಲ್ಲ, ಬೇರೆ ಯಾವುದೇ ಕ್ರೀಡಾಪಟುಗಳೂ ಅಲ್ಲ. ಇವರೆಲ್ಲ ಸ್ಪರ್ಧೆಗೆ ಬಂದಿದ್ದ ಹೋರಿಗಳು (ಎತ್ತುಗಳು). ಝಗಮಗಿಸುವ ವಸ್ತ್ರಾಲಂಕಾರ, ಹೂ ಹಾರ, ಮಿಂಚುವ ಝರಿ ಹಾರ, ಕೊಡುಗಳಿಗೆ ರಿಬ್ಬನ್, ಬಲೂನ್‌ಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಹೋರಿಗಳು ಛಂಗನೆ ಜಿಗಿದು ದಿಕ್ಕೆಟ್ಟು ಓಡಿದಾಗ ಇತ್ತ ನೆರೆದ ಜನರಲ್ಲಿ, ಸಿಳ್ಳೆ, ಕೇಕೆ, ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು.ಇದು ನಗರದ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಹಾಗೂ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಬಲಿಪಾಡ್ಯದ ದಿನವಾದ ಶನಿವಾರ ಆಯೋಜಿಸಿದ್ದ ಈ ವರ್ಷದ ಮೊದಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ.
ಬೆಳಗ್ಗೆಯಿಂದಲೇ ಆರಂಭಗೊಂಡ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಕರ್ನಾಟಕ ರತ್ನ, ಪವರ್, ಕದಂಬ, ಬಲೆಟ್, ನಾಗರಹಾವು, ರಾಕಿಬಾಯ್, ಹಾವೇರಿ ಡಾನ್, ಟೈಗರ್, ರೆಬಲ್‌ಸ್ಟಾರ್, ಸಾಹಸಸಿಂಹ, ಡಾ.ರಾಜ್, ಚಾಮುಂಡಿ ಎಕ್ಸ್‌ಪ್ರೆಸ್, ಆ್ಯಂಬುಲೆನ್ಸ್, ಕರ್ನಾಟಕ ಎಕ್ಸಪ್ರೆಸ್ ಹಾವೇರಿ ಕಾ ರಾಜಾ, ಹಾವೇರಿ ಕಾ ಸ್ಟಾರ್, ಸೂಪರ್, ಡಿಂಗ್, ಬಹದ್ದೂರ, ಕರ್ನಾಟಕದ ಹುಲಿ, ಹಾವೇರಿ ಹುಲಿ, ಸುರಂಗ, ಘಟಸರ್ಪ ಸೇರಿದಂತೆ ಹಲವಾರು ನಾಮದಿಂದ ಕರೆಯಲ್ಪಡುತ್ತಿದ್ದ ಈ ಹೋರಿಗಳನ್ನು ಅದರ ಮಾಲೀಕರು ಕೊಬ್ಬರಿ ಹರಿಯುವ ಯುವಕರ ಕೈಗೆ ಸಿಗದಂತೆ ಓಡಿಸುತ್ತಿದ್ದರು. ಇನ್ನೊಂದೆಡೆ ಕೊಬ್ಬರಿ ಹರಿಯಲು ಯುವಕರು ಹರಸಾಹಸ ಪಡುತ್ತಿದ್ದ ದೃಶ್ಯ ನೋಡಲು ರೋಮಾಂಚನಕಾರಿಯಾಗಿತ್ತು.ಸ್ಪರ್ಧೆಗಿಳಿಸಲು ತಂದಿರುವ ಹೋರಿಗಳ ಕೊರಳಲ್ಲಿ 10-20 ಕೆಜಿಯವರೆಗೂ ಒಣಕೊಬ್ಬರಿಯ ಹಾರಗಳನ್ನು ಹಾಕಲಾಗಿತ್ತು. ಕೊರಳಲ್ಲಿರುವ ಈ ಕೊಬ್ಬರಿ ಹಾರವನ್ನು ಸಾಹಸಮಯವಾಗಿ ಕಿತ್ತುಕೊಂಡರೇ ಆ ಹೋರಿಯನ್ನು ಆ ಯುವಕ ಬೆದರಿಸಿದಂತೆ. ವಿಶಿಷ್ಟವಾಗಿ ಅದ್ಧೂರಿಯಾಗಿ ಅಲಂಕೃತ, ಕೆಜಿಗಟ್ಟಲೇ ಒಣಕೊಬ್ಬರಿ ಹಾರ ಹಾಕಿಕೊಂಡಿರುವ ಹೋರಿ, ಯಾರ ಕೈಗೂ ಸಿಗದೇ ಛಂಗನೇ ಜಿಗಿದು... ಸರ‍್ರನೇ ಓಡಿದಾಗ ಅದರ ಮಾಲೀಕ ರೈತನಿಗಾಗುವ ಸಂತಸ ಅಷ್ಟಿಷ್ಟಲ್ಲ. ಶೌರ್ಯದ ಪ್ರತೀಕವಾಗಿ ಬೆದರಿಸುವ ಕೊಬ್ಬರಿ ಹೋರಿ ಸ್ಪರ್ಧೆ ಅಷ್ಟೆ ಅಪಾಯಕಾರಿ ಆಟವೂ ಆಗಿದೆ. ಆದರೂ ದೀಪಾವಳಿ ಪಾಡ್ಯದಿಂದ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಯಾವುದೇ ಅಡೆತಡೆಯಿಲ್ಲದೇ ಸಂಭ್ರಮದಿಂದ ನಡೆಯಿತು.
ಹೋರಿಯೊಂದಿಗೆ ಕಾದಾಡಿ ಕೊರಳಲ್ಲಿ ಕಟ್ಟಿದ ಕೊಬ್ಬರಿ ಹರಿಯಲು, ಯುವಕರು ಹಿಡಕೋರಿ ಹೋರಿ ಹಿಡಕೋರಿ ಎಂದು ಪ್ರಾಣದ ಹಂಗನ್ನು ತೊರೆದು ಮುಗಿ ಬೀಳುತ್ತಿದ್ದ ದೃಶ್ಯಗಳು ರೋಚಕವಾಗಿದ್ದವು. ಕೆಲವೊಮ್ಮೆ ಜಾರಿಬೀಳುತ್ತಿದ್ದ ಯುವಕರಿಗೆ ಸಣ್ಣಪುಟ್ಟ ಗಾಯಗಳು ಸಾಮಾನ್ಯವಾಗಿದ್ದವು. ಅವುಗಳನ್ನು ಲೆಕ್ಕಿಸದೇ ಹೋರಿ ಹಿಡಿಯಲು ಮತ್ತೆ ಸಜ್ಜಾಗುತ್ತಿದ್ದರು.ಹೋರಿ ಓಡಿಸುವಾಗ ಕಾಲು ಜಾರದಿರಲಿ ಎಂದು ಡಾಂಬರ್ ರಸ್ತೆ ಮೇಲೆ ಮಣ್ಣನ್ನು ಹಾಕಿ ಅಖಾಡ ಸಿದ್ಧಗೊಳಿಸಲಾಗಿತ್ತು. ಸ್ಪರ್ಧೆ ನಡೆಯುವ ರಸ್ತೆ ಇಕ್ಕೆಲಗಳಲ್ಲಿ ಓಡುವ ಹೋರಿಗಳಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಹಾಗೂ ಜನರಿಗೆ ವೀಕ್ಷಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಟ್ಟಿಗೆ ತಡೆಗೋಡೆ ನಿರ್ಮಿಸಲಾಗಿತ್ತು. ಹೋರಿ ಬೆದರಿಸುವ ಕಾರ್ಯಕ್ರಮ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಹೋರಿಗಳಿಗೆ ವಿಶೇಷ ಅಲಂಕಾರ: ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿ ಸ್ಪರ್ಧೆಯ ಅಖಾಡದಲ್ಲಿ ಬಿಡಲಾಗುತ್ತದೆ. ಈ ಹೊತ್ತಿನಲ್ಲಿ ಹೋರಿಗಳ ಗತ್ತು ನೋಡುವುದೇ ಎಲ್ಲರಿಗೂ ಎಲ್ಲಿಲ್ಲದ ಸಂತಸ. ಹೋರಿಗಳಿಗೆ ರಂಗು ರಂಗಿನ ಜೂಲಾ ಹಾಕಿ, ಕೊರಳಲ್ಲಿ ಗೆಜ್ಜೆಸರ, ಕೊಂಬುಗಳಿಗೆ ಬಗೆಗೆಯ ಬಲೂನ್‌ಗಳನ್ನು ಹಾಗೂ ರಿಬ್ಬನ್ ಕಟ್ಟಿ ಸಿಂಗರಿಸಿ, ಕೊರಳಿಗೆ ಒಣ ಕೊಬ್ಬರಿ ಹಾರವನ್ನು ಕಟ್ಟಿ ಅಖಾಡದಲ್ಲಿ ಓಡಿಸಲಾಯಿತು. ಇದರಲ್ಲಿಯ ಕೆಲ ಹೋರಿಗಳನ್ನು ಫೈಲ್ವಾನರು ಹಿಡಿದು ಕೊಬ್ಬರಿಯನ್ನು ಹರಿದುಕೊಳ್ಳುವ ಮೂಲಕ ತಮ್ಮ ಚಾಕಚಕ್ಯತೆ ಮೆರೆದರು. ನೋಡುಗರಿಗೆ ಉತ್ತಮ ಮನರಂಜನೆ ನೀಡಿತು.ಹೋರಿ ಬೆದರಿಸುವ ಸ್ಪರ್ಧೆ ಆರಂಭ: ನಗರದಲ್ಲಿ ವೀರಭದ್ರೇಶ್ವರ ದೇಗುಲದ ಎದುರು ಆರಂಭವಾದ ಈ ಹೋರಿ ಬೆದರಿಸುವ ಸ್ಪರ್ಧೆ ಎರಡು ತಿಂಗಳುಗಳ ಕಾಲ ಜಿಲ್ಲೆಯಾದ್ಯಂತ ಈ ಜಾನಪದ ಕ್ರೀಡೆಯಾಗಿ ನಿರಂತರವಾಗಿ ನಡೆಯುತ್ತದೆ. ಬಲಿಪಾಡ್ಯದ ದಿನದಂದು ಆರಂಭವಾದ ಸ್ಪರ್ಧೆ ಜಿಲ್ಲೆಯ ವಿವಿಧ ಭಾಗದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಗಳು ಕೆಲವು ಗ್ರಾಮಗಳಲ್ಲಿ ಆಯೋಜಿಸಲಾಗುತ್ತದೆ. ಬಂಗಾರ, ಬೆಳ್ಳಿ, ಬೈಕ್ ಸೇರಿದಂತೆ ನಾನಾ ಬಹುಮಾನಗಳನ್ನು ಸ್ಪರ್ಧೆಯಲ್ಲಿ ವಿಜೇತರಿಗೆ ನೀಡಲಾಗುತ್ತದೆ.