ಸಾರಾಂಶ
ಯುವಕರು ತಾಳ ಮದ್ದಲೆಯೊಂದಿಗೆ ಭಕ್ತಿ ಗೀತೆ, ಪಾಂಡುರಂಗನ ಅಭಂಗ, ದಾಸರ ಪದ ಹಾಡುಗಳಿಗೆ ಮಕ್ಕಳು ಹೆಜ್ಜೆ
ಲಕ್ಷ್ಮೇಶ್ವರ: ಪಟ್ಟಣದ ಸೋಮವಂಶ ಕ್ಷತ್ರೀಯ ಸಮಾಜದವರ ಗಣಪತಿ ವಿಸರ್ಜನಾ ಕಾರ್ಯಕ್ರಮ ನೋಡುಗರಿಗೆ ಮುದ ನೀಡಿತ್ತು.
ಗಣಪತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಅಶ್ಲೀಲ ಡಿಜೆ ಸೌಂಡ್‌ಗೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಹೆಜ್ಜೆ ಹಾಕುತ್ತ ಗಣಪತಿ ವಿಸರ್ಜನೆ ಮಾಡುವುದು ಈಗೀನ ಟ್ರೆಂಡ್ ಆಗಿರುವ ಕಾಲದಲ್ಲಿ ಶುಭ್ರ ವಸ್ತ್ರ ಧರಿಸಿದ ಭಾವಸಾರ ಸಮಾಜದ ಯುವಕರು ತಾಳ ಮದ್ದಲೆಯೊಂದಿಗೆ ಭಕ್ತಿ ಗೀತೆ, ಪಾಂಡುರಂಗನ ಅಭಂಗ, ದಾಸರ ಪದ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುತ್ತ ಶಿಸ್ತು ಬದ್ದವಾಗಿ ಗಣಪತಿ ವಿಸರ್ಜನಾ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಶಿಗ್ಲಿ ಕ್ರಾಸ್ ಹತ್ತಿರದ ಗಣಪತಿ ವಿಸರ್ಜನಾ ಕಾರ್ಯಕ್ಕೆ ತೆಗೆದಿರುವ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.ಗಣಪತಿಯ ವಿಸರ್ಜನಾ ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್‌ಐ ಈರಪ್ಪ ರಿತ್ತಿ ಮಾತನಾಡಿ, ಗಣೇಶ ನಮ್ಮ ಕಷ್ಟ ದೂರ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸುವ ಕಾರ್ಯ ಮಾಡುತ್ತಾನೆ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಕಣ್ಮೆರೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಡಿಜೆ ಸೌಂಡಿನಲ್ಲಿ ಗಣಪತಿ ಮಾಡುವ ಮೂಲಕ ಪರಿಸರ ಮಾಲಿನ್ಯದಿಂದ ಅನೇಕ ರೋಗಿಗಳು ಹಾಗೂ ಹೃದಯ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರು, ಚಿಕ್ಕ ಮಕ್ಕಳು ಡಿಜೆ ಸೌಂಡಿನ ಆಘಾತಕ್ಕೆ ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಆದ್ದರಿಂದ ನಮ್ಮ ಸಂಪ್ರದಾಯದಂತೆ ಗಣಪತಿ ವಿಸರ್ಜನೆ ಮಾಡುತ್ತಿರುವ ಎಸ್‌ಎಸ್‌ಕೆ ಸಮಾಜದ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಈ ವೇಳೆ ಎಸ್‌ಎಸ್‌ಕೆ ಹಾಗೂ ಭಾವಸಾರ ಸಮಾಜದ ಯುವಕರು ಮಹಿಳೆಯರು ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.