ಬಿಡದಿಯಲ್ಲಿ ಇ - ಖಾತೆ ಕ್ಯಾತೆಗೆ ಮುಕ್ತಿ

| Published : Feb 02 2025, 01:01 AM IST

ಸಾರಾಂಶ

ರಾಮನಗರ: ಸ್ವತ್ತುದಾರರ ಅಲೆದಾಟ ತಪ್ಪಿಸಿ ಖಾತೆ ಕ್ಯಾತೆಗೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಇ-ಖಾತೆ ಆಂದೋಲನ ಬಿಡದಿ ಪುರಸಭೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ರಾಮನಗರ: ಸ್ವತ್ತುದಾರರ ಅಲೆದಾಟ ತಪ್ಪಿಸಿ ಖಾತೆ ಕ್ಯಾತೆಗೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಇ-ಖಾತೆ ಆಂದೋಲನ ಬಿಡದಿ ಪುರಸಭೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆಯಲ್ಲಿರುವ ಬಿಡದಿಯಲ್ಲಿ ಮೆಟ್ರೋ, ಏರ್‌ಪೋರ್ಟ್, ಟೌನ್ ಶಿಪ್‌ ನಿರ್ಮಾಣದ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ಬಿಡದಿ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಲು ಎಷ್ಡು ಕಷ್ಟವೋ, ಅದಕ್ಕೆ ಇ-ಖಾತೆ ಪಡೆದುಕೊಳ್ಳಲು ಅಷ್ಟೇ ಕಷ್ಟಪಡಬೇಕಾಗಿತ್ತು.

ಆದರೆ ಇದೀಗ ಬಿಡದಿ ಪುರಸಭೆ ಹಮ್ಮಿಕೊಂಡಿರುವ ಇ-ಖಾತೆ ಆಂದೋಲನ ಖಾತೆ ಸಮಸ್ಯೆಗೆ ಮುಕ್ತಿ ಹಾಡಲು ಕಾರಣವಾಗಿದೆ. ಅನಗತ್ಯ ವಿಳಂಬ, ಕಚೇರಿ ಅಲೆದಾಟ, ಕಿರಿಕಿರಿ ಇಲ್ಲದೆ ಇ - ಖಾತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಅದು ಅರ್ಜಿದಾರರ ಮನೆ ಬಾಗಿಲಿಗೆಯೇ ಇ-ಖಾತೆ ತಲುಪಿಸುವ ಮಾದರಿ ಕಾರ್ಯಕ್ಕೆ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮುಂದಾಗಿದ್ದಾರೆ.

ಬಿಡದಿ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳ ಸುಮಾರು 500ಕ್ಕೂ ಹೆಚ್ಚು ಇ-ಖಾತಾ ಪತ್ರಗಳನ್ನು ಮನೆ ಮನೆಗೆ ವಿತರಣೆಗೆ ಅಧ್ಯಕ್ಷ ಹರಿಪ್ರಸಾದ್ ಮುಂದಾಗಿದ್ದು ಸಾಂಕೇತಿಕವಾಗಿ ಶನಿವಾರ ವಿತರಣೆಗೆ ಚಾಲನೆ ನೀಡಿದರು.

ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ 21350 ಸುಮಾರು ಸ್ವತ್ತು ಗಳಿದ್ದು, ಇ-ಖಾತಾ ಪ್ರಾರಂಭದಿಂದ ಇದುವರೆಗೆ 5 ಸಾವಿರ ಇ ಖಾತಾ ವಿತರಣೆಗಳನ್ನು ಮಾಡಲಾಗಿದೆ. ಮಾಲೀಕರು ತಮ್ಮ ಸ್ವತ್ತು ಗಳಿಗೆ ಇ- ಸ್ವತ್ತು ಪಡೆಯುವುದು ಅವಶ್ಯಕ, ಮನೆ ಕಟ್ಟಿಕೊಳ್ಳಲು, ಬ್ಯಾಂಕಿನಿಂದ ಸಾಲ ಪಡೆಯಲು ಮತ್ತಿತರ ವಹಿವಾಟು ನಡೆಸಲು ಸಹ ನೆರವಾಗಲಿದೆ. ಈ ಪ್ರಾಮುಖ್ಯತೆಯಿರುವ ಇ-ಸ್ವತ್ತು ಎಲ್ಲರಿಗೂ ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಇದಕ್ಕಾಗಿ ಡಿಸೆಂಬರ್ 9ರಿಂದ ಜನವರಿ 2ರವರೆಗೆ ಪ್ರತಿ ವಾರ್ಡ್‌ಗೆ ತೆರಳಿ ಇ-ಖಾತೆ ಅರ್ಜಿಗಳನ್ನು ಸ್ವೀಕರಿಸಿದ್ದೆವು. ಇಲ್ಲಿ ಸ್ವೀಕೃತವಾದ 500ಕ್ಕೂ ಅಧಿಕ ಅರ್ಜಿಗಳನ್ನು ಪರಿಶೀಲಿಸಿ ಕೇವಲ ಒಂದು ತಿಂಗಳೊಳಗೆ ಇ-ಖಾತೆಗಳನ್ನು ಸೃಜನೆ ಮಾಡಲಾಗಿದೆ. ಎಲ್ಲಾ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಹಲವು ದಿನಗಳಿಂದ ಇ- ಸ್ವತ್ತು ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದರು. ಅದನ್ನು ಮನಗಂಡು ಸ್ವತ್ತಿನ‌ ಮಾಲೀಕರಿಂದ ದಾಖಲೆಗಳನ್ನು ಪಡೆದು ಇ-ಸ್ವತ್ತು ಪತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ. ಮುಂದುವರೆದು ಮಾಲೀಕರ ಮನೆ ಬಾಗಿಲಿಗೆ ಹೋಗಿ ಆ ವಾರ್ಡಿನ‌ ಸದಸ್ಯರ ಸಮ್ಮುಖ ದಲ್ಲಿ ವಿತರಣೆ ಮಾಡಲಾಗುವುದು. ಇದರಿಂದ ಪುರಸಭೆ ಆಡಳಿತವನ್ನು ಜನರ ಬಳಿಗೆ ಕೊಂಡೊ ಯ್ಯುವ ಜೊತೆಗೆ ಪುರಸಭೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಲಿದೆ ಎಂದು ಹರಿಪ್ರಸಾದ್ ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್, ಮುಖ್ಯಾಧಿಕಾರಿ ರಮೇಶ್, ಅಧಿಕಾರಿಗಳಾದ ಮುಸ್ತಫಾ, ನಟರಾಜು, ಗೌಸ್ ಮತ್ತಿತರರು ಹಾಜರಿದ್ದರು.

1ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹರಿಪ್ರಸಾದ್ ಸ್ವತ್ತಿನ ಮಾಲೀಕರಿಗೆ ಇ - ಖಾತೆ ವಿತರಿಸಿದರು. ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್, ಮುಖ್ಯಾಧಿಕಾರಿ ರಮೇಶ್, ಅಧಿಕಾರಿಗಳಾದ ಮುಸ್ತಫಾ, ನಟರಾಜು, ಗೌಸ್ ಮತ್ತಿತರರು ಹಾಜರಿದ್ದರು.