ಅಂಗವಿಕಲ ನೌಕರರಿಗೆ ವರ್ಗಾವಣೆಯಿಂದ ವಿನಾಯ್ತಿ

| Published : Jun 13 2024, 12:45 AM IST

ಸಾರಾಂಶ

ವಿಕಲಚೇತನ ನೌಕರರು ಹಾಗೂ ಅಧಿಕಾರಿಗಳಿಗೆ ನಿಯತಕಾಲಿಕ ಹಾಗೂ ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಬೇಕು. ಪದೋನ್ನತಿ ಮತ್ತಿತರ ಅನಿವಾರ್ಯ ಸಂದರ್ಭಗಳಲ್ಲಿ ನಿವಾಸದ ಹತ್ತಿರದ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಕಲಚೇತನ ನೌಕರರು ಹಾಗೂ ಅಧಿಕಾರಿಗಳಿಗೆ ನಿಯತಕಾಲಿಕ ಹಾಗೂ ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಬೇಕು. ಪದೋನ್ನತಿ ಮತ್ತಿತರ ಅನಿವಾರ್ಯ ಸಂದರ್ಭಗಳಲ್ಲಿ ನಿವಾಸದ ಹತ್ತಿರದ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಜತೆಗೆ, ಸಾರ್ವತ್ರಿಕ ವರ್ಗಾವಣೆ ಅವಧಿಯಲ್ಲೂ ಅಂಗವಿಕಲ ನೌಕರರಿಗೆ ತೊಂದರೆಯಾಗದಂತೆ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.

ಇದು ಕೇವಲ ವಿಕಲಚೇತನ ನೌಕರರಿಗೆ ಮಾತ್ರವಲ್ಲದೆ ಮನೆಯಲ್ಲಿರುವ ಮಕ್ಕಳು, ಪತಿ/ಪತ್ನಿ ಅಥವಾ ಪೋಷಕರು ಅಂಗವಿಕಲರಾಗಿದ್ದು, ಅವರ ನಿರ್ವಹಣೆಯನ್ನು ಹೊತ್ತಿರುವ ನೌಕರರಿಗೂ ಅನ್ವಯಿಸಬೇಕು ಎಂದು ತಿಳಿಸಲಾಗಿದೆ.

ಅಂಗವಿಕಲ ವ್ಯಕ್ತಿಗಳ ಹಕ್ಕು 2016ರ ಕಾಯ್ದೆ ಪ್ರಕಾರ ವಿಕಲಚೇತನ ಹಾಗೂ ವಿಕಲಚೇತನರು ಅವಲಂಬಿತರಾಗಿರುವ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಯಿಂದ ವಿನಾಯಿತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದರಂತೆ ಜೂ.12 ರಂದು ಸುತ್ತೋಲೆ ಹೊರಡಿಸಿದ್ದು, ವಿಕಲಚೇತನ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಬೇಕು.

ವಿಶೇಷ ಚೇತನರು ನೇಮಕಾತಿಗೆ ಆಯ್ಕೆಯಾದ ನಂತರದಲ್ಲಿ ನೀಡುವ ಪ್ರಾರಂಭಿಕ ಸ್ಥಳ ನಿಯುಕ್ತಿ ಹಾಗೂ ಪದೋನ್ನತಿಯ ನಂತರ ವರ್ಗಾವಣೆ ಅಗತ್ಯವಿದ್ದರೆ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನಿಯುಕ್ತಿಗೊಳಿಸಬೇಕು.

ಸರ್ಕಾರಿ ನೌಕರನ ಅವಲಂಬಿತ ಮಕ್ಕಳು, ಪತಿ/ಪತ್ನಿ, ತಂದೆ, ತಾಯಿ ಇವರಲ್ಲಿ ಯಾರಾದರೂ ತೀವ್ರ ಅಂಗವೈಕಲ್ಯ ಹೊಂದಿದ್ದು ಸರ್ಕಾರಿ ನೌಕರ ಅವರ ಜವಾಬ್ದಾರಿ, ಸಂರಕ್ಷಣೆ ಜವಾಬ್ದಾರಿ ಹೊತ್ತಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಅರ್ಹರಾದರೆ ನಿಯತಕಾಲಿಕ ವರ್ಗಾವಣೆಗಳಿಂದ ವಿನಾಯಿತಿ ನೀಡಬಹುದು. ವರ್ಗಾವಣೆ ಅನಿವಾರ್ಯವಾದರೆ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನಿಯುಕ್ತಿ ಮಾಡಬೇಕು.

ಸೇವಾನಿರತ ಸರ್ಕಾರಿ ನೌಕರರು ತಮ್ಮ ಸೇವೆಯ ಅವಧಿಯಲ್ಲಿ ಅಂಗವಿಕಲರಾದರೆ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ ಹಾಜರುಪಡಿಸುವ ಷರತ್ತಿಗೊಳಪಟ್ಟು ಅವರನ್ನು ಹತ್ತಿರದ ಸ್ಥಳಕ್ಕೆ ವರ್ಗಾವಣೆ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.