ಶರಾವತಿ ಹಿನ್ನೀರು ಪ್ರದೇಶವು ಪ್ರಿ-ವೆಡ್ಡಿಂಗ್ ಶೂಟಿಂಗ್‌ಗೆ ಜನಪ್ರಿಯವಾಗುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಯುವ ಜೋಡಿಗಳು, ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು ಆಗಮಿಸುತ್ತಿದ್ದಾರೆ.

ಕಾರವಾರ: ಹೊನ್ನಾವರದ ಶರಾವತಿ ಹಿನ್ನೀರು ಪ್ರದೇಶದಲ್ಲಿ ಪ್ರಿ-ವೆಡ್ಡಿಂಗ್ ಫೋಟೋ ಮತ್ತು ವಿಡಿಯೋ ಶೂಟಿಂಗ್‌ಗೆ ಬಳಸುವ ಬೋಟ್‌ಗಳಿಗೆ ಜಾರಿಯಲ್ಲಿರುವ ಕಾಲಮಿತಿ ಹಾಗೂ ಟೋಕನ್ ಆಧಾರಿತ ಸರದಿ ವ್ಯವಸ್ಥೆಯಿಂದ ಸೂಕ್ತ ವಿನಾಯಿತಿ ನೀಡುವಂತೆ ಉತ್ತರ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಶರಾವತಿ ಹಿನ್ನೀರು ಪ್ರದೇಶವು ಪ್ರಿ-ವೆಡ್ಡಿಂಗ್ ಶೂಟಿಂಗ್‌ಗೆ ಜನಪ್ರಿಯವಾಗುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಯುವ ಜೋಡಿಗಳು, ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು ಆಗಮಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಬೋಟ್ ಮಾಲೀಕರು ಹಾಗೂ ಪ್ರವಾಸೋದ್ಯಮ ಅವಲಂಬಿತರಿಗೆ ಆದಾಯದ ಅವಕಾಶಗಳು ದೊರೆಯುತ್ತಿವೆ ಎಂದು ಸಂಘ ತಿಳಿಸಿದೆ.

ಪ್ರಿ-ವೆಡ್ಡಿಂಗ್ ಶೂಟಿಂಗ್‌ಗೆ ಬೆಳಗ್ಗೆ ಹಾಗೂ ಸಂಜೆ ವೇಳೆಯ ನೈಸರ್ಗಿಕ ಬೆಳಕು ಹೆಚ್ಚು ಸೂಕ್ತವಾಗಿರುವುದರಿಂದ, ಪ್ರಸ್ತುತ ಜಾರಿಯಲ್ಲಿರುವ ಕಾಲಮಿತಿ ಹಾಗೂ ಟೋಕನ್ ವ್ಯವಸ್ಥೆಯಿಂದ ಚಿತ್ರೀಕರಣಕ್ಕೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಗ್ರಾಹಕರು ಬೋಟ್‌ನ ಅಲಂಕಾರ, ವಿನ್ಯಾಸ ಹಾಗೂ ನೋಟಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಶೂಟಿಂಗ್‌ಗಾಗಿ ವಿಶೇಷವಾಗಿ ಸಿದ್ಧಪಡಿಸಿರುವ ಬೋಟ್‌ಗಳನ್ನು ಸರದಿ ವ್ಯವಸ್ಥೆಯಲ್ಲಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಘ ಹೇಳಿದೆ.

ಕೆಲವು ಬೋಟ್ ಮಾಲೀಕರು ಪ್ರಿ-ವೆಡ್ಡಿಂಗ್ ಶೂಟಿಂಗ್‌ಗೆ ಬೋಟ್ ನೀಡಲು ಸಿದ್ಧರಿಲ್ಲದಿರುವುದರಿಂದ, ಈ ಉದ್ದೇಶಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಿರುವ ಬೋಟ್‌ಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ, ಅವುಗಳಿಗೆ ಕಾಲಮಿತಿ ಹಾಗೂ ಟೋಕನ್ ಆಧಾರಿತ ಸರದಿ ವ್ಯವಸ್ಥೆಯಿಂದ ಸೂಕ್ತ ವಿನಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಹೊನ್ನಾವರ, ಉಪಾಧ್ಯಕ್ಷ ಅನಂತ ಪೈ, ಕಾರವಾರ ಸಂಘದ ಅಧ್ಯಕ್ಷ ಸಂತಾನ್ ಫರ್ನಾಂಡಿಸ್, ಖಜಾಂಚಿ ಲಕ್ಷ್ಮೀಶ್ ಭಂಡಾರಿ, ಹೊನ್ನಾವರ ತಾಲೂಕು ಸಂಘದ ಉಪಾಧ್ಯಕ್ಷ ರಾಜು ಉಪ್ಪಾರ್, ಕುಮಟಾ ತಾಲೂಕು ಅಧ್ಯಕ್ಷ ಪ್ರಶಾಂತ್ ನಾಯ್ಕ, ಕಾರ್ಯದರ್ಶಿ ವಿನಾಯಕ ನಾಯ್ಕ ಹಾಗೂ ನಾಗರಾಜ್ ಅಂಬಿಗ ಉಪಸ್ಥಿತರಿದ್ದರು.