ಚಿಕ್ಕಮಗಳೂರುಜನಗಣತಿ ಮಾಹಿತಿಯನ್ನು ನಿಖರವಾಗಿ ಮತ್ತು ಸಮಗ್ರವಾಗಿ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದ್ದು, ಗಣತಿ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಸೂಚಿಸಿದರು.

- ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಸೂಚನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜನಗಣತಿ ಮಾಹಿತಿಯನ್ನು ನಿಖರವಾಗಿ ಮತ್ತು ಸಮಗ್ರವಾಗಿ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದ್ದು, ಗಣತಿ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಸೂಚಿಸಿದರು.ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಭಾರತ ಜನಗಣತಿ-2027ರ ಅಂಗವಾಗಿ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಜನಗಣತಿಯ ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮಾಡುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 2ನೇ ಹಂತದಲ್ಲಿ ಜನಸಂಖ್ಯೆ ಗಣತಿ ನಡೆಯಲಿದ್ದು, ಮನೆಮನೆ ಗಣತಿ ಕಾರ್ಯ ಜ. 25ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಸಾರ್ವಜನಿಕರಿಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಜ.10ರಿಂದ 24ರವರೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.ಈ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಕುಟುಂಬ ಹಾಗೂ ಮನೆಗೆ ಸಂಬಂಧಿಸಿದ ಮಾಹಿತಿ ಸ್ವತಃ ವೆಬ್‌ಪೋರ್ಟಲ್‌ನಲ್ಲಿ ದಾಖಲಿಸಿಕೊಳ್ಳಬಹುದು. ನಂತರ ಗಣತಿದಾರರು ಮನೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಲಿದ್ದಾರೆ. 2ನೇ ಹಂತದ ಗಣತಿ ಕಾರ್ಯ ಯಶಸ್ವಿಯಾಗಲು ಅಧಿಕಾರಿಗಳು ತರಬೇತಿಯಲ್ಲಿ ನೀಡುವ ಮಾಹಿತಿ ಸಂಪೂರ್ಣವಾಗಿ ಪಡೆಯ ಬೇಕು. ಯಾವುದೇ ಸಂದೇಹಗಳಿದ್ದಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳಿಂದ ಪರಿಹರಿಸಬೇಕು ಎಂದು ಸೂಚಿಸಿದರು.ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮಾತನಾಡಿ ಮೊದಲ ಹಂತದ ಮನೆಗಳ ಪಟ್ಟಿ ಕಾರ್ಯ ಪೂರ್ಣಗೊಂಡಿದ್ದು, 2ನೇ ಹಂತದ ಜನಸಂಖ್ಯೆ ಗಣತಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಈಗಾಗಲೇ ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾ ಗಿದ್ದು, ಇದೀಗ ಚಾರ್ಜ್ ಅಧಿಕಾರಿಗಳು ಮತ್ತು ಸಹಾಯಕ ಚಾರ್ಜ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.ಜನಸಂಖ್ಯೆ ಗಣತಿಗೆ ಪಾಪುಲೇಷನ್ ಬ್ಲಾಕ್‌ಗಳನ್ನು ರಚಿಸುವ ವಿಧಾನ, ಹೆಚ್ಚುವರಿ ಬ್ಲಾಕ್‌ಗಳ ಅಗತ್ಯವಿದ್ದಲ್ಲಿ ಅನುಸರಿ ಸಬೇಕಾದ ಮಾನದಂಡ ಹಾಗೂ ಕ್ರಮಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಈ ಬಾರಿಯ ಜನಗಣತಿ ಸಂಪೂರ್ಣ ಡಿಜಿಟಲ್ ರೂಪದಲ್ಲಿರಲಿದೆ. ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಿದ್ದು, ಸಾರ್ವಜನಿಕರು ವೆಬ್‌ಪೋರ್ಟಲ್ ಮೂಲಕ ಸ್ವಯಂ ಗಣತಿ ಮಾಡಬಹುದು. ಇದರಿಂದ ಸಮಯ ಉಳಿತಾಯವಾಗುವ ಜತೆಗೆ ದತ್ತಾಂಶದ ನಿಖರತೆ ಹೆಚ್ಚಲಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ನೀಡುವ ಎಸ್‌ಸಿ ಐಡಿ ಸಂಖ್ಯೆ ನಮೂದಿಸಿ ಮಾಹಿತಿ ಪರಿಶೀಲಿಸಬಹುದು. ಮೊಬೈಲ್ ಸಂಖ್ಯೆ ಮತ್ತು ಬ್ಲಾಕ್ ಲಿಂಕ್ ಮಾಡುವುದರಿಂದ ಸ್ಥಳ ಗುರುತಿಸುವಿಕೆ ಹಾಗೂ ಮರುಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗಲಿವೆ ಎಂದರು.ಜನಗಣತಿ ನಮೂನೆಯಲ್ಲಿ ಒಟ್ಟು 40 ಪ್ರಶ್ನೆಗಳಿದ್ದು, ಹೆಸರು, ಲಿಂಗ, ಮನೆ ಮುಖ್ಯಸ್ಥರೊಂದಿಗಿನ ಸಂಬಂಧ, ವಯಸ್ಸು, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ಜಾತಿ, ಪೋಷಕರ ವಿವರ, ವಿಕಲಚೇತನರ ಮಾಹಿತಿ, ಸಾಕ್ಷರತೆ, ಮಾತೃಭಾಷೆ, ಗರಿಷ್ಠ ಶಿಕ್ಷಣ, ಉದ್ಯೋಗದ ಸ್ವರೂಪ, ವಲಸೆಗೆ ಕಾರಣ ಮತ್ತು ಮೂಲ ಸ್ಥಳ ಸೇರಿದಂತೆ ವಿವಿಧ ವಿವರಗಳನ್ನು ಸಂಗ್ರಹಿಸ ಲಾಗುತ್ತದೆ. ಅಲ್ಲದೆ ಆಧಾರ್, ಪ್ಯಾನ್, ಚಾಲನಾ ಪರವಾನಗಿ ಹಾಗೂ ಬ್ಯಾಂಕ್ ಖಾತೆಗಳ ಸಂಖ್ಯೆಗಳನ್ನೂ ದಾಖಲಿಸಲಾಗುತ್ತದೆ ಎಂದು ವಿವರಿಸಿದರು.ವಿಜಯ ಆತ್ಮಾರಾಮ್ ಅಹಿರೆ ಅವರು ಕಾರ್ಯಾಗಾರದಲ್ಲಿ ತರಬೇತಿ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀನಾಕ್ಷಿ ಆರ್ಯ, ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.