ಮತದಾನ ಪ್ರತಿಯೊಬ್ಬರ ಹಕ್ಕು ತಪ್ಪದೇ ಚಲಾಯಿಸಿ

| Published : Apr 04 2024, 01:07 AM IST

ಸಾರಾಂಶ

ಹೊಸಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದ್ದ ಪ್ರತಿಯೊಬ್ಬ ಮತದಾರನು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜೆಎಂಎಫ್‌ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ಹೊಸಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದ್ದ ಪ್ರತಿಯೊಬ್ಬ ಮತದಾರನು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜೆಎಂಎಫ್‌ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ನಗರದಲ್ಲಿ ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರನ ಜವಾಬ್ದಾರಿ ಇದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ಯಾರೂ ತಪ್ಪಿಸಿಕೊಳ್ಳದಂತೆ ಮತ್ತು ಜಾಗೃತರಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮತದಾರರನ್ನು ಪ್ರೇರೇಪಿಸುವ ಸಲುವಾಗಿ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮತದಾನದ ಮಹತ್ವವನ್ನು ಅರಿತು ಪ್ರತಿಯೊಬ್ಬ ಮತದಾರನು ಕಡ್ಡಾಯವಾಗಿ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು ಎಂದು ಹೇಳಿದರು.

ಸಹಾಯಕ ಚುನಾವಣಾ ಅಧಿಕಾರಿ ಕಿಶನ್ ಕಲಾಲ್ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ಮತದಾನ ನಡೆಯುತ್ತಿದ್ದು, ಪ್ರತಿಯೊಬ್ಬ ಅರ್ಹ ಮತದಾರನೂ ತಪ್ಪದಂತೆ ಮತದಾನದಲ್ಲಿ ಪಾಲ್ಗೊಳ್ಳಬೇಕು. ಇದನ್ನು ಭಾರತದ ಪ್ರತಿಯೊಬ್ಬನೂ ಒಂದು ದೊಡ್ಡ ಹಬ್ಬದಂತೆ ಸಂಭ್ರಮಿಸಬೇಕು. ಮತದಾನ ನಮ್ಮ ಜನ್ಮ ಸಿದ್ದ ಹಕ್ಕಾಗಿದ್ದು ಅದನ್ನು ಧೈರ್ಯವಾಗಿ ನಿರ್ಭೀತಿಯಿಂದ ಚಲಾವಣೆ ಮಾಡಬೇಕು ಎಂದರು.

ಮತದಾನದ ಅರಿವು ಮೂಡಿಸುವ ಬಿತ್ತಿ ಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ನಗರದ ಕೋರ್ಟ್ ವೃತ್ತದಿಂದ ತಾಲ್ಲೂಕು ಕಚೇರಿಯ ಆವರಣದವರೆಗೆ ಸಂಚರಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ್ ಸನದಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಚೈತ್ರ ವಿ.ಕುಲಕರ್ಣಿ, ತಹಶೀಲ್ದಾರ್ ವಿಜಯ್‌ಕುಮಾರ್, ನಗರಸಭೆಯ ಪೌರಾಯುಕ್ತ ಜಹೀರ್ ಅಬ್ಬಾಸ್, ವಕೀಲರ ಸಂಘದ ಉಪಾಧ್ಯಕ್ಷ ಕೆ.ನಾಗರಾಜ್, ಪ್ರ.ಕಾರ್ಯದರ್ಶಿ ನವೀನ್ ಕುಮಾರ್, ಜಂಟಿ ಕಾರ್ಯಧರ್ಶಿ ಮುನಿರಾಜು, ಖಜಾಂಚಿ ರವಿಕುಮಾರ್ ಸೇರಿದಂತೆ ತಾಲೂಕು ಕಚೇರಿ ಮತ್ತು ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ಇತರರಿದ್ದರು.ಫೋಟೋ: 3 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸ್ವೀಪ್ ಸಮಿತಿಯಿಂದ ನಡೆದ ಮತದಾನ ಅರಿವು ಜಾಗೃತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್, ಸಹಾಯಕ ಚುನಾವಣಾಧಿಕಾರಿ ಕಿಶನ್ ಕಲಾಲ್ ಚಾಲನೆ ನೀಡಿದರು.