ಸಾರಾಂಶ
ಮಸ್ಕಿಯಲ್ಲಿ ಶೇ.59.2ರಷ್ಟು ಮಾತ್ರ ಪ್ರಗತಿ । ಕಂದಾಯ ಇಲಾಖೆಯಿಂದ ಜಾಗೃತಿ
ಕನ್ನಡಪ್ರಭ ವಾರ್ತೆ ಮಸ್ಕಿ
ರಾಜ್ಯ ಸರ್ಕಾರ ರೈತರ ಪಹಣಿ(ಆಟ್‌ಟಿಸಿ)ಗಳಿಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಸಿಕೊಳ್ಳಲು ಈಗಾಗಲೇ ಸೂಚಿಸಿದ್ದರಿಂದ ತಾಲೂಕಿನ ಶೇ.59.2ರಷ್ಟು ರೈತರು ತಮ್ಮ ಜಮೀನುಗಳ ಪಹಣಿಗಳಿಗೆ ಆಧಾರ್‌ಕಾರ್ಡ್ ಜೋಡಣೆ ಮಾಡಿಸಿಕೊಂಡಿದ್ದಾರೆ. ಜೊತೆಗೆ ತಹಸೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಜಮೀನು ಅಕ್ರಮ ವರ್ಗಾವಣೆ ತಡೆಯಲು ಹಾಗೂ ಸರ್ಕಾರದ ಸಹಾಯಧ ಪಡೆಯಲು ಮದ್ಯವರ್ತಿ ಹಾವಳಿ ತಪ್ಪಿಸಲು ಆಧಾರ್ ಲಿಂಕ್ ಮಾಡಿಸಿಕೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿಗೆ ಆಧಾರ ಜೋಡಣೆ ಮಾಡಿಸುವುದರಿಂದ ರೈತರ ಜಮೀನುಗಳನ್ನು ಅಕ್ರಮವಾಗಿ ಬೇರೆಯವರಿಗೆ ವರ್ಗಾವಣೆ ಮಾಡುವುದನ್ನು ತಡೆಯಲು ಇದು ಅನೂಕೂಲವಾಗಲಿದೆ ಅಲ್ಲದೇ ಸರ್ಕಾರದ ಯಾವುದೇ ಯೋಜನೆಗಳ ಸಹಾಯಧನ ಪಡೆಯಲು ಮದ್ಯವರ್ತಿ ಹಾವಳಿಯನ್ನು ತಪ್ಪಿಸಿ ರೈತರಿಗೆ ನೇರವಾಗಿ ಇದರ ಲಾಭ ಸಿಗಲಿದೆ. ಆದ್ದರಿಂದ ಕಂದಾಯ ಇಲಾಖೆಯಿಂದ ರೈತರ ಜಮೀನುಗಳಿಗೆ ಆಧಾರ್ ಜೋಡಣೆ ಮಾಡಿಸುವುದಕ್ಕಾಗಿ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲು ಹರಸಾಹಸ ಪಡುವಂತಾಗಿದೆ.
ಆರ್‌ಟಿಸಿಗಳಿಗೆ ಆಧಾರ್ ಜೋಡಣೆ ಮಾಡಿಸುವಂತೆ ಕಂದಾಯ ಇಲಾಖೆಯ ಗಾಮ ಆಡಳಿತ ಅಧಿಕಾರಿ, ಆರ್‌ಐ ಅವರೊಂದಿಗೆ ತಾಲೂಕಿನ ಗುಡದೂರು ಹೋಬಳಿಯ ತಲೆಖಾನ್, ಗುಂಡ, ಬೊಮ್ಮನಾಳ (ಯು), ಬಪ್ಪೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಭೇಟಿ ನೀಡಿ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸುತಿದ್ದಾರೆ.ಮಸ್ಕಿ ತಾಲೂಕಿನಲ್ಲಿ ಶೇ.59 ರಷ್ಟು ಪ್ರಗತಿ: ಮಸ್ಕಿ ತಾಲೂಕಿನಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯವು ಮಂದಗತಿಯಲ್ಲಿದ್ದು, ಮಸ್ಕಿ ಹೋಬಳಿ ಶೇ.50 ರಷ್ಟು ಪಾಮನಕಲ್ಲೂರ ಹೋಬಳಿಯಲ್ಲಿ ಶೇ.71ರಷ್ಟು, ಹಾಲಾಪುರ್ ಹೋಬಳಿಯಲ್ಲಿ ಶೇ.63, ಬಳಗಾನೂರು ಹೋಬಳಿಯಲ್ಲಿ ಶೇ.67 ಹಾಗೂ ಗುಡದೂರ್ ಹೋಬಳಿಯಲ್ಲಿ ಶೇ.54 ಸೇರಿದಂತೆ ಮಸ್ಕಿ ತಾಲೂಕಿನಲ್ಲಿ ಒಟ್ಟಾರೆ ಶೇ.59 ರಷ್ಟು ಪ್ರಗತಿಯಾಗಿದೆ.