ಚುನಾವಣಾ ಜಾಗೃತಿಯಲ್ಲಿ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಮತದಾನ ನಮ್ಮ ಹಕ್ಕು ಇದನ್ನು ಜಾಗೃತವಾಗಿ ಚಲಾಯಿಸಬೇಕು ಎಂದು ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಅಣ್ಣಿಗೇರಿ ಬಿ.ಎಸ್. ಅವರು ಹೇಳಿದರು.
ಹಾವೇರಿ: ಚುನಾವಣಾ ಜಾಗೃತಿಯಲ್ಲಿ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಮತದಾನ ನಮ್ಮ ಹಕ್ಕು ಇದನ್ನು ಜಾಗೃತವಾಗಿ ಚಲಾಯಿಸಬೇಕು ಎಂದು ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಅಣ್ಣಿಗೇರಿ ಬಿ.ಎಸ್. ಅವರು ಹೇಳಿದರು.
ಸ್ಥಳೀಯ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಮೇರಾ ಯುವ ಭಾರತ ಹಾವೇರಿ ಮತ್ತು ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಹಾಗೂ ಐ.ಕ್ಯೂ.ಎ.ಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಪ್ರಬುದ್ಧ ಮತದಾರರು ಆದಾಗ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯೆ ಸವಿತಾ ಹಿರೇಮಠ ಮಾತನಾಡಿ, ನಮ್ಮ ಮತ, ನಮ್ಮ ಹಕ್ಕು ಅದನ್ನು ನಾವೆಲ್ಲ ಅತ್ಯಂತ ಆಲೋಚನಾಯುಕ್ತವಾಗಿ ಚಲಾಯಿಸಬೇಕು. ಯಾರು ಇದುವರೆಗೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಲ್ಲವೋ ಅವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಡಾ. ಸಂತೋಷ ಆಲದಕಟ್ಟಿ ಮಾತನಾಡಿ, ಯುವ ಜನಾಂಗಕ್ಕೆ ಮತದಾನದ ಜಾಗೃತಿಯ ಅವಶ್ಯಕತೆ ಇದೆ. ಯಾವ ಯುವ ಜನಾಂಗವು ದೇಶದ ಪ್ರಗತಿ ಮತ್ತು ವ್ಯವಸ್ಥೆಯ ತಳಹದಿಯಾಗಿದೆಯೋ ಅಂತಹ ಯುವಕ, ಯುವತಿಯರಿಗೆ ಜಾಗೃತಿ ಅಗತ್ಯವಿದೆ ಎಂದರು. ಮೇರಾ ಯುವ ಭಾರತ ಜಿಲ್ಲಾ ಅಧಿಕಾರಿ ಭುಕ್ಯಾ ಸಂಜೀವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪುರಸಿದ್ದೇಶ್ವರ ದೇವಸ್ಥಾನದಿಂದ ನಗರದ ವಿವಿಧ ಬಡಾವಣೆಯಲ್ಲಿ ಜಾಥಾ ಮೂಲಕ ಸಂಚರಿಸಿ ಮತದಾನದ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಹೊಸ ಮತದಾನ ಮಾಡುವ ಯುವತಿಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ಎಸ್.ಎ. ಸೈಯದ್ ಮತ್ತು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಇದ್ದರು. ನೇತ್ರಾ ತಳವಾರ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ವಿ. ಹಿರೇಮಠ ಸ್ವಾಗತಿಸಿದರು. ಚಂದ್ರಕಲಾ ನಾಗನೂರ ವಂದಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಂ.ಎಂ. ಮಡಿವಾಳರ ನಿರೂಪಿಸಿದರು.