ಎಲ್ಲರೂ ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ

| Published : Apr 05 2024, 01:10 AM IST

ಸಾರಾಂಶ

ಹೊಸಕೋಟೆ: ಪ್ರಜಾಪ್ರಭುತ್ವದ ಉಳಿವು ಪ್ರಜೆಗಳ ಕೈಯಲ್ಲಿದ್ದು, ಮತದಾನವೆಂಬ ಪವಿತ್ರ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಬೇಕು ಎಂದು ಐಟಿಸಿ ಕಂಪನಿಯ ಸಂಪನ್ಮೂಲ ಅಧಿಕಾರಿ ಎಂ.ಎಲ್.ಮನೋಹರ್ ತಿಳಿಸಿದರು

ಹೊಸಕೋಟೆ: ಪ್ರಜಾಪ್ರಭುತ್ವದ ಉಳಿವು ಪ್ರಜೆಗಳ ಕೈಯಲ್ಲಿದ್ದು, ಮತದಾನವೆಂಬ ಪವಿತ್ರ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಬೇಕು ಎಂದು ಐಟಿಸಿ ಕಂಪನಿಯ ಸಂಪನ್ಮೂಲ ಅಧಿಕಾರಿ ಎಂ.ಎಲ್.ಮನೋಹರ್ ತಿಳಿಸಿದರು

ತಾಲೂಕಿನ ಅನುಗೊಂಡಹಳ್ಳಿ ಹೋಬಳಿಯ ದೇವನಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೌಖ್ಯ ಕೈಗಾರಿಕಾ ಪ್ರದೇಶದ ಐಟಿಸಿ ಕಂಪನಿಯಲ್ಲಿ ಹೊಸಕೋಟೆ ತಾಲೂಕು ಸ್ವೀಪ್ ವತಿಯಿಂದ ಲೋಕಸಭಾ ಚುನಾವಣೆಯ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಬೇಕು. ಆ ಮೂಲಕ ಸದೃಢ ಮನಸ್ಸು ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯುಳ್ಳ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಕಾರ್ಮಿಕರಿಗೆ ಮನವರಿಕೆ ಮಾಡಿದರು.

ತಹಸೀಲ್ದಾರ್ ವಿಜಯ್ ಕುಮಾರ್ ಮಾತನಾಡಿ, ಸಂವಿಧಾನದ ಆಶಯದಂತೆ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವ ಮೂಲಕ ಎಲ್ಲರೂ ಜವಾಬ್ದಾರಿ ಮೆರೆಯುವುದು ಅತ್ಯವಶ್ಯ. ಹಾಗಾಗಿ ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯುವ ಬೇಜವಾಬ್ದಾರಿ ತೋರದೆ ನಿಮಗೆ ಸೂಕ್ತ ಎನಿಸುವ ಅಭ್ಯರ್ಥಿಗೆ ಮತ ಹಾಕುವುದು ಜವಾಬ್ದಾರಿ ಎನಿಸಿಕೊಳ್ಳುತ್ತದೆ ಎಂದು ತಿಳಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮತದಾನ ಜಾಗೃತಿ ಮತ್ತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇಒ ಮಂಜುನಾಥ್‌, ಅಧಿಕಾರಿಗಳಾದ ಹರೀಶ್, ಡಿ.ಮೊಹಬೂಬ್ ಪಾಷಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೌಡರೆಡ್ಡಿ ಹಾಗೂ ಸಿಬ್ಬಂದಿ, ಕಂಪನಿ ಕಾರ್ಮಿಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.ಫೋಟೋ: 4 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದ ಐಟಿಸಿ ಕಂಪನಿಯಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಸಹಾಯಕ ಚುನಾವಣಾಧಿಕಾರಿ ಕಿಶನ್ ಕಲಾಲ್ ಚಾಲನೆ ನೀಡಿದರು.