ವಿಶ್ವಗುರು ಭಾರತಕ್ಕಾಗಿ ಹೆಚ್ಚು ಮತಗಳಿಂದ ಗೆಲ್ಲಿಸಿ: ರಾಘವೇಂದ್ರ

| Published : Apr 05 2024, 01:10 AM IST

ವಿಶ್ವಗುರು ಭಾರತಕ್ಕಾಗಿ ಹೆಚ್ಚು ಮತಗಳಿಂದ ಗೆಲ್ಲಿಸಿ: ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.

ಕನ್ನಡಪ್ರಭವಾರ್ತೆ ಸಾಗರ

ಭಾರತವನ್ನು ವಿಶ್ವಗುರುವಾಗಿಸುವ ನರೇಂದ್ರ ಮೋದಿಯವರ ಸಂಕಲ್ಪವನ್ನು ಸಾಕಾರಗೊಳಿಸಲು ತಮ್ಮನ್ನು ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

ಪಟ್ಟಣದ ಗಾಂಧಿ ಮೈದಾನದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಚುನಾವಣೆ ಗೆಲುವಿನ ಮೂಲಕ ವಿಕಸಿತ ಭಾರತಕ್ಕೆ ಭದ್ರ ಅಡಿಪಾಯ ಹಾಕುವ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮೆಡಿಕಲ್ ಕಾಲೇಜು, ಕೃಷಿ ಕಾಲೇಜು ಸೇರಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ಅನೇಕ ಯೋಜನೆ ತರಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಮುಂದಿನ ಐದು ವರ್ಷದಲ್ಲಿ ಇನ್ನಷ್ಟು ಅಭಿವೃದ್ಧಿ ಪರ್ವ ಕಾಣಲಿದೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಮೂಲಕ ಮತ್ತೊಮ್ಮೆ ನಿಮ್ಮ ಬಳಿ ಬರುತ್ತಿದೆ. ಈಗಾಗಲೆ ರಾಜ್ಯದಲ್ಲಿ ನೀಡಿರುವ ಗ್ಯಾರಂಟಿ ಒಬ್ಬರ ಜೇಬಿನಿಂದ ಕಿತ್ತು ಇನ್ನೊಬ್ಬರಿಗೆ ಕೊಡುತ್ತಿರುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ನರೇಂದ್ರ ಮೋದಿಯವರು ನೀಡಿರುವ ಜನಪರ ಯೋಜನೆಗಳನ್ನು ಮುಖಂಡರು, ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಮೂಲಕ ಅತಿಹೆಚ್ಚು ಮತಗಳ ಅಂತರದಿಂದ ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ನಮ್ಮನಮ್ಮ ಬೂತ್ ಗೆದ್ದರೆ ನಮ್ಮ ಅಭ್ಯರ್ಥಿಯನ್ನು ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬಹುದು. ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಯೋಜನೆ ಜನರ ಮನೆ ಹಾಗೂ ಮನವನ್ನು ಮುಟ್ಟಿದೆ. ೧೦ ವರ್ಷಗಳ ಕಾಲ ಸಣ್ಣ ಆಪಾದನೆ ಇಲ್ಲದೆ ಆಡಳಿತ ನಡೆಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ಭಾರತವನ್ನು ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಸಂಕಲ್ಪ ಮೋದಿಯವರದ್ದಾಗಿದೆ. ನರೇಂದ್ರ ಮೋದಿಯವರ ಕೈ ಬಲಪಡಿಸಲು ಬಿ.ವೈ.ರಾಘವೇಂದ್ರ ಅವರನ್ನು ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು, ದೇವೇಂದ್ರಪ್ಪ ಯಲಕುಂದ್ಲಿ, ಪ್ರಸನ್ನ ಕೆರೆಕೈ, ಕೆ.ಆರ್.ಗಣೇಶ್ಪ್ರಸಾದ್, ಮಧುರಾ ಶಿವಾನಂದ್, ಕೆ.ಸಿ.ದೇವಪ್ಪ, ಅರುಣ ಕುಗ್ವೆ, ಸುವರ್ಣ ಟೀಕಪ್ಪ ಇನ್ನಿತರರು ಹಾಜರಿದ್ದರು.