ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಜಿಲ್ಲೆಯಾದ್ಯಂತ ಬಿರು ಬಿಸಿಲು ಜನರನ್ನು ತತ್ತರಿಸುವಂತೆ ಮಾಡಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ ಉಷ್ಣಾಂಶ 40 ಡಿಗ್ರಿ ದಾಟಿದ್ದು, ಜನರು ಮನೆಯಿಂದ ಆಚೆ ಬರಲು ಕೂಡಾ ಭಯ ಪಡುವಂತಾಗಿದೆ.ಹೀಗೆ ಬಿಸಿಲಿನ ತಾಪದಿಂದ ತತ್ತರಿಸಿರುವ ಜನರಿಗೆ ವರದಾನವಾಗಿರುವುದು ಜಿಲ್ಲಾ ಕ್ರೀಡಾ ಇಲಾಖೆಯಡಿಯಲ್ಲಿ ನಡೆಯುತ್ತಿರುವ 4 ಸರ್ಕಾರಿ ಈಜುಕೊಳಗಳು, ಬೆಳಗಾಗುತ್ತಿದ್ದಂತೆ ಯುವಕರು ಅವಳಿ ನಗರದ ಈಜುಕೊಳದಲ್ಲಿ ಮುಳುಗಿ ಬಿಸಿಲಿ ತಾಪದಿಂದ ಪಾರಾಗುತ್ತಿದ್ದಾರೆ.
ದಾಖಲೆ ಉಷ್ಣಾಂಶ: ಏಪ್ರಿಲ್ ಮೊದಲ ವಾರದಲ್ಲಿಯೇ ದಾಖಲೆಯ ಉಷ್ಣಾಂಶ ದಾಖಲಾಗಿದ್ದು, ಮುಂಬರುವ ಮೇ ತಿಂಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಹವಾಮಾನ ಇಲಾಖೆ, ಉಷ್ಣಾಂಶದಲ್ಲಿ ಆಗುತ್ತಿರುವ ಭಾರೀ ಹೆಚ್ಚಳದಿಂದ ವಯೋವೃದ್ಧರು, ವಿವಿಧ ಧೀರ್ಘಕಾಲ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಲ್ಲಿಯೇ ಇದ್ದರೂ ತತ್ತರಿಸಿ ಹೋಗಿದ್ದಾರೆ. ಅದರಲ್ಲಿಯೂ ಶಾಲೆಗಳಿಗೆ ರಜೆ ಪ್ರಾರಂಭವಾಗಿದ್ದು, ಮಕ್ಕಳನ್ನು ಮನೆಯಿಂದ ಆಚೆ ಬಿಡದ ವಾತಾವರಣ ನಿರ್ಮಾಣವಾಗಿದೆ.ತುಂಬಿ ತುಳುಕುತ್ತಿವೆ ಈಜುಕೊಳ: ಗದಗ-ಬೆಟಗೇರಿ ಅವಳಿ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ, ಕಳಸಾಪೂರ ರಸ್ತೆಯಲ್ಲಿನ ಈಜುಕೊಳ, ರಾಜೀವಗಾಂಧಿ ನಗರದ ಹಾಗೂ ಬೆಟಗೇರಿ ವಸಂತ್ ಸಿಂಗ್ ಜಮಾದಾರ ನಗರದಲ್ಲಿನ 4 ಈಜುಕೊಳಗಳು ಯುವಕರಿಂದ ತುಂಬಿ ತುಳುಕುತ್ತಿದ್ದು, ಸ್ವಲ್ಪ ತಡವಾದರೂ ಈಜುಕೊಳದಲ್ಲಿ ಕಾಲಿಡಲು ಸ್ಥಳವಿಲ್ಲದಂತೆ ಯುವಕರು ಲಗ್ಗೆ ಇಡುತ್ತಿದ್ದು, ಬಿಸಿಲಿನ ಆರ್ಭಟದಿಂದ ಪಾರಾಗಲು ಅವಳಿ ನಗರದಲ್ಲಿನ ಸರ್ಕಾರಿ ಈಜುಕೊಳಗಳು ಸಾಕಷ್ಟು ಅನುಕೂಲಕಾರಿಯಾಗಿವೆ.
ಉತ್ತಮ ನಿರ್ವಹಣೆ: ಸರ್ಕಾರಿ ಈಜುಕೊಳಗಳು ಎಂದರೆ, ಅಲ್ಲಿ ಸ್ವಚ್ಚತೆ ಇರುವುದಿಲ್ಲ, ನೀರು ಬದಲಾವಣೆ ಸರಿಯಾಗಿ ಮಾಡುವುದಿಲ್ಲ, ಅತ್ಯಂತ ಕೆಟ್ಟ ನಿರ್ವಹಣೆಯಿಂದ ಹೆಸರುವಾಸಿ, ಆದರೆ ಗದಗ ನಗರದ ಎಲ್ಲ 4 ಈಜುಕೊಳಗಳು ಅತ್ಯುತ್ತಮ ನಿರ್ವಹಣೆಯಿಂದ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದು, ಖಾಸಗಿ ಈಜುಕೊಳಗಳತ್ತ ಸಾರ್ವಜನಿಕರು ಮುಖ ಮಾಡದಂತೆ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವುದು ಈಜುಕೊಳಕ್ಕೆ ಬರುವ ಯುವಕರ ಅಭಿಪ್ರಾಯ.ಭಾನುವಾರ ₹ 50 ಸಾವಿರ ಸಂಗ್ರಹ ಅವಳಿ ನಗರದ 4 ಈಜುಕೊಳಗಳಲ್ಲಿ ಪ್ರತಿ ಭಾನುವಾರ ₹ 50 ಸಾವಿರದವರೆಗೆ, ಶನಿವಾರ ₹ 30 ಸಾವಿರ ಇನ್ನುಳಿದ ಸಾಮಾನ್ಯ ದಿನಗಳಲ್ಲಿ 20 ಸಾವಿರದವರೆಗೂ ಹಣ ಸಂಗ್ರಹವಾಗುತ್ತಿದೆ. 21 ದಿನಗಳ ತರಬೇತಿಗೆ ₹3 ಸಾವಿರ, ಪ್ರತಿ ದಿನದ 45 ನಿಮಿಷದ ಈಜಿಗೆ ಕೇವಲ ₹50 ನಿಗದಿ ಮಾಡಿದ್ದು, ಪ್ರತಿ ಈಜುಕೊಳದಲ್ಲಿ ತರಬೇತಿದಾರರು, ಜೀವ ರಕ್ಷಕರು, ಸ್ವಚ್ಛತಾ ಕಾರ್ಯದ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ: ರಾಜ್ಯದ ಹಲವಾರು ದೊಡ್ಡ ದೊಡ್ಡ ನಗರಗಳಿವೆ ಆದರೆ ಸರ್ಕಾರಿ ಸ್ವಾಮ್ಯದಲ್ಲಿ ಇಷ್ಟೊಂದು ಈಜುಕೊಳಗಳಿಲ್ಲ, ಇದ್ದರೂ ಅವುಗಳು ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿವೆ. ಆದರೆ ಗದಗ ನಗರದಲ್ಲಿನ 4 ಈಜುಕೊಳಗಳನ್ನು ಸರ್ಕಾರದ ಬೇರೆ ಅನುದಾನದಲ್ಲಿ ನಿರ್ಮಿಸಿದ್ದು, ಕ್ರೀಡಾ ಇಲಾಖೆಯ ಮೂಲಕ ನಿರ್ವಹಣೆ ಮಾಡುತ್ತಿದ್ದು, ಇದು ರಾಜ್ಯದಲ್ಲಿಯೇ ಪ್ರಥಮವಾಗಿದೆ.ಗದಗ ಶಾಸಕರ ವಿಶೇಷ ಕಾಳಜಿಯಿಂದ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಈಜುಕೊಳಗಳು ಲಭ್ಯವಾಗುತ್ತಿವೆ. ಬೇಸಿಗೆ ಬಿಸಿಲಿನಿಂದ ತತ್ತರಿಸಿರುವ ಜನರಿಗೆ ಸದ್ಯ ಈಜುಕೊಳಗಳು ಹೆಚ್ಚು ಸಹಕಾರಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಮ್ಮ ಈಜುಕೊಳಗಳಿಗೆ ಬರುತ್ತಿದ್ದಾರೆ. ಮುಂದಿನ ತಿಂಗಳು ಸಂಖ್ಯೆ ಇನ್ನು ಹೆಚ್ಚಾಗಲಿದೆ. ಈಜುಕೊಳಗಳ ನಿರ್ವಹಣೆಗಾಗಿ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಕ್ರೀಡಾಧಿಕಾರಿ ಶರಣು ಗೋಗೇರಿ ಹೇಳಿದರು.