ಸಾರಾಂಶ
ಸಂಡೂರು: ಪಟ್ಟಣದ ಹೊರವಲಯದಲ್ಲಿರುವ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಭಾನುವಾರ ಇನ್‌ಕ್ರೆಡಿಬಲ್ ಇಂಡಿಯಾ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸಮಕಾಲೀನ ಸಮಾಜದ ಚಿತ್ರಣ, ವೈಜ್ಞಾನಿಕ ಸತ್ಯಗಳನ್ನು ಪ್ರತಿಪಾದಿಸುವ ವಸ್ತು ಪ್ರದರ್ಶನ, ದೇಶದ ಎಲ್ಲ ರಾಜ್ಯಗಳ ಉಡುಗೆ-ತೊಡುಗೆ, ಸಂಸ್ಕೃತಿ, ಸ್ಮಾರಕಗಳು ಪ್ರದರ್ಶನಗೊಂಡು ನೋಡುಗರನ್ನು ಆಕರ್ಷಿಸಿದವು.
ಪುಟಾಣಿ ಮಕ್ಕಳಿಂದ ನಡೆದ ಮಕ್ಕಳ ಸಂತೆಯಲ್ಲಿ ತರಕಾರಿ ಹಣ್ಣುಗಳಿಂದ ಹಿಡಿದು ಸ್ಟೀಲ್, ಹಿತ್ತಾಳೆ, ಮಣ್ಣಿನ ಮಡಕೆ, ಉಡುಪುಗಳು, ತಿನಿಸುಗಳನ್ನು ಮಾರಾಟಕ್ಕಿಡಲಾಗಿತ್ತು. ಪುಟಾಣಿಗಳು ಗ್ರಾಹಕರನ್ನು ತಮ್ಮ ಮಾತಿನ ಮೋಡಿಯಿಂದ ಜನತೆಯನ್ನು ಆಕರ್ಷಿಸಿ, ವಸ್ತುಗಳನ್ನು ಖರೀದಿಸುವಂತೆ ಮಾಡುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ದೇಶದ ಎಲ್ಲ ರಾಜ್ಯಗಳಲ್ಲಿನ ವೈವಿದ್ಯಮಯ ಸಂಸ್ಕೃತಿ, ಅಲ್ಲಿನ ಉಡುಗೆ ತೊಡುಗೆ, ತಿನಿಸುಗಳು, ನೃತ್ಯ ಶೈಲಿ, ಸ್ಮಾರಕಗಳನ್ನು ಪ್ರದರ್ಶಿಸಿ, ಭಾರತದ ಶ್ರೀಮಂತ ವೈವಿದ್ಯಮಯ ಸಂಸ್ಕೃತಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದರು.
ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಜನತೆಗೆ ವಿವಿಧ ರಾಜ್ಯಗಳಲ್ಲಿನ ತಿನಿಸುಗಳನ್ನು ಆಸ್ವಾದಿಸಲು ಅವಕಾಶ ದೊರೆಯಿತು.ಬಿಕೆಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕಿ ಕಮಲಮ್ಮ, ಟ್ರಸ್ಟಿ ಬಿ. ನಾಗನಗೌಡ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಳಕಲ್‌ನ ಮಕ್ಕಳ ತಜ್ಞ ಡಾ. ಪವನಕುಮಾರ್ ಧಾರಕ್, ಬಿಕೆಜಿ ಗ್ಲೋಬಲ್ ಪಿಯು ಕಾಲೇಜು ಹಾಗೂ ಶಾಲೆಯ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ಪ್ರದರ್ಶನದ ವೀಕ್ಷಣೆ ನಡೆಸಿ, ವಿದ್ಯಾರ್ಥಿಗಳ ಕೌಶಲ್ಯ, ಜಾಣ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.