ಕನ್ನಡ ನಮ್ಮ ನಾಡಿನ ಜನರ ಅಸ್ತಿತ್ವ ಮತ್ತು ಅಸ್ಮಿತೆ: ದೊ.ಚಿ.ಗೌಡ

| Published : Nov 03 2025, 01:45 AM IST

ಸಾರಾಂಶ

ರಾಜ್ಯದ ಅಗ್ರಮಾನ್ಯ ಸಾಹಿತಿಗಳಾದ ಕುವೆಂಪು ಸೇರಿದಂತೆ ಚಂದ್ರಶೇಖರ್ ಕಂಬಾರರವಗೆ ಜ್ಞಾನಪೀಠ ಪ್ರಶಸ್ತಿ ಪಡೆದು ನಮ್ಮ ಕನ್ನಡ ಭಾಷೆಯನ್ನು ಉತ್ತುಂಗಗೊಳಿಸಿ ನಾಡು-ನುಡಿ ಹಾಗೂ ಕನ್ನಡ ನಾಡಿನ ಕಲೆ, ಸಂಸ್ಕೃತಿಯ ಕುರಿತಾಗಿ ಸಮೃದ್ಧ ಸಾಹಿತ್ಯ ರಚಿಸಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂದೊಡ್ಡಿ

ಕನ್ನಡ ನಮ್ಮ ನಾಡಿನ ಜನರ ಅಸ್ತಿತ್ವ ಮತ್ತು ಅಸ್ಮಿತೆ. ಕನ್ನಡವನ್ನು ಬರೀ ಭಾಷೆಯನ್ನಾಗಿ ನೋಡದೆ ನಮ್ಮ ಬದುಕಾಗಿ ಕಾಣಬೇಕು. ನಾವೆಲ್ಲರೂ ಸಂಘಟಿತರಾಗಿ ಭಾಷೆ ಉಳಿವಿಗೆ ಶ್ರಮಿಸಬೇಕು ಎಂದು ರೈತ ಕವಿ ದೊ.ಚಿ.ಗೌಡ ಕರೆ ನೀಡಿದರು.

ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕನ್ನಡ ಹೋರಾಟಗಾರರ ವೇದಿಕೆಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ ಶ್ರೀಮಂತಿಕೆಯೂ ಪ್ರಾಚೀನ ಕಾಲದಿಂದಲೂ ಬಂದಿದೆ. ಕ್ರಿಸ್ತ ಪೂರ್ವ 450ನೇ ಶತಮಾನದದಿಂದ ಆರಂಭಗೊಂಡು ಕದಂಬ ರಾಜ ಮನೆತನದಿಂದ ಶ್ರೇಷ್ಠಕವಿಗಳಾದ ಆದಿ ಕವಿ ಪಂಪನಿಂದ ಇಲ್ಲಿಯವರೆಗೂ ಅನೇಕ ಕವಿ ಮಾನ್ಯರ ಹೋರಾಟಗಳು ಕಾರಣವಾಗಿದೆ ಎಂದರು.

ರಾಜ್ಯದ ಅಗ್ರಮಾನ್ಯ ಸಾಹಿತಿಗಳಾದ ಕುವೆಂಪು ಸೇರಿದಂತೆ ಚಂದ್ರಶೇಖರ್ ಕಂಬಾರರವಗೆ ಜ್ಞಾನಪೀಠ ಪ್ರಶಸ್ತಿ ಪಡೆದು ನಮ್ಮ ಕನ್ನಡ ಭಾಷೆಯನ್ನು ಉತ್ತುಂಗಗೊಳಿಸಿ ನಾಡು-ನುಡಿ ಹಾಗೂ ಕನ್ನಡ ನಾಡಿನ ಕಲೆ, ಸಂಸ್ಕೃತಿಯ ಕುರಿತಾಗಿ ಸಮೃದ್ಧ ಸಾಹಿತ್ಯ ರಚಿಸಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಹನುಮಂತನಗರದ ಭಾರತೀ ಸಂಯುಕ್ತ ವಸತಿ ಕಾಲೇಜಿನ ಉಪನ್ಯಾಸಕ ಶಿವಲಿಂಗೇಗೌಡ ಮಾತನಾಡಿ, ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವುದು ಮಂಡ್ಯ ಜಿಲ್ಲೆಯಲ್ಲಿ. ಕನ್ನಡವನ್ನು ಹೆಚ್ಚು ಬಳಕೆ ಮಾಡುವ ಮೂಲಕ ಭಾಷೆ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೇಗೌಡ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳ ತಜ್ಞ ಡಾ.ಮೋಹನ್ ಬಾಬು ಹಾಗೂ ಕನ್ನಡ ಪರ ಹೋರಾಟಗಾರ, ತಾಲೂಕು ಕರವೇ ಅಧ್ಯಕ್ಷ ಮಣಿಗೆರೆ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ರೈತ ಮುಖಂಡ ಅಣ್ಣೂರು ಮಹೇಂದ್ರ, ಸಿ.ಎ.ಕೆರೆ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಅಯೋಜಕರಾದ ಕರಡಕೆರೆ ಯೋಗೇಶ್, ಗುರುದೇವರಹಳ್ಳಿ ನವೀನ್ ಗೌಡ, ಟಿಬಿ ಹಳ್ಳಿ ಸಂತೋಷ, ಕ್ಯಾತಘಟ್ಟ ಪ್ರಸಾದ್, ಗ್ರಾಪಂ ಸದಸ್ಯ ಕಾರ್ಕಳ್ಳಿ ಮಹೇಶ್, ಅಣ್ಣೂರು ರಂಜಿತ್, ವಿಕಾಸ್, ಬೋರೇಗೌಡ , ಜಯಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.