ರಾಣಿಬೆನ್ನೂರು: ಜನಸಂಖ್ಯೆ ಹೆಚ್ಚಾಗಿರುವ ರಾಣಿಬೆನ್ನೂರ ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ಮಂಜೂರು ಮಾಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಮಂಜೂರ ಆಗಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ಸ್ಥಳೀಯ ಇಸ್ಲಾಂಪುರ ಓಣಿಯಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಮ್ಮ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾಸ್ಪತ್ರೆ ಮಂಜೂರ ಮಾಡುವುದರಿಂದ ರಾಣಿಬೆನ್ನೂರ, ಹಿರೇಕೆರೂರು, ಬ್ಯಾಡಗಿ ಹಾಗೂ ರಟ್ಟಿಹಳ್ಳಿ ತಾಲೂಕಿನ ಜನರಿಗೆ ಅನುಕೂಲವಾಗಲಿದೆ. ಈ ಕುರಿತು ಈಗಾಗಲೇ ಸಿಎಂ ಅವರ ಗಮನಕ್ಕೂ ತರಲಾಗಿದೆ ಎಂದರು.ವೈದ್ಯರನ್ನು ದೇವರಿಗೆ ಹೋಲಿಸಲಾಗಿದೆ. ಜೀವ ಉಳಿಸುವ ಶಕ್ತಿ ಅವರಲ್ಲಿದೆ. ಬಡವರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸರಕಾರ ನಮ್ಮ ಕ್ಲಿನಿಕ್ ಆರಂಭಿಸಿದ್ದು, ಜನರ ಇದರ ಸೇವೆಯನ್ನು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಗರಕ್ಕೆ ಅವಶ್ಯವಿರುವ ಇನ್ನಷ್ಟು ಕ್ಲಿನಿಕ್ ಆರಂಭಿಸಲಾಗುವುದು ಎಂದರು.ಚುನಾವಣೆಯ ಮುನ್ನ ನೀಡಿರುವ ಭರವಸೆಯಂತೆ ಈಗಾಗಲೇ ಶಿಕ್ಷಣ, ಆರೋಗ್ಯ, ಕ್ರೀಡೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿಯಲ್ಲಿ ತಂತ್ರಜ್ಞಾನಕ್ಕೆ ಮಹತ್ವ ನೀಡಲಾಗಿದೆ. ರಾಣಿಬೆನ್ನೂರ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿಪಟುಗಳು ಇರುವುದರಿಂದ ಗರಡಿ ಮನೆ ಮಾಡಬೇಕಾಗಿದ್ದು, ಅದಕ್ಕಾಗಿ ಅನುದಾನ ಮೀಸಲಿಡಲಾಗಿದೆ. ನಾಲ್ಕು ಕಡೆಗಳಲ್ಲಿ ಗರಡಿ ಮಾಡುವ ಜೊತೆಗೆ ಎಲ್ಲಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಪ್ರೊ. ಕಬಡ್ಡಿ ಮಾದರಿಯಲ್ಲಿ ಕ್ರೀಡಾಂಗಣ ಹಾಗೂ ಒಪನ್ ಜಿಮ್ ಮಾಡಲಾಗುವುದು ಎಂದರು.ಡಿಎಚ್‌ಒ ಡಾ. ಜಯಾನಂದ, ಟಿಎಚ್‌ಒ ಪ್ರಕಾಶ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ಶೇರುಖಾನ ಕಾಬೂಲಿ, ಮೆಹಬೂಬ್ ಮುಲ್ಲಾ, ಜಮಾನಿಸಾಬ ಅತ್ತಾರ, ಹಬಿಬುಲ್ಲಾ ಕಂಬಳಿ, ಪುಟ್ಟಪ್ಪ ಮರಿಯಮ್ಮನವರ, ಸದ್ದಾಂ ಖಾಜಿ, ಡಾ.ರಾಜು ಶಿರೂರ, ಜಪರುಲ್ಲಾ ಕಂಚಾರಗಟ್ಟಿ, ಬಸಿರುಲ್ಲಾ ಖಾಜಿ, ಪ್ರಕಾಶ ಪೂಜಾರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.