ಮುಂಗಾರಿನಲ್ಲಿ ಶೇ.37 ಮಳೆ ಕೊರತೆ: ಹೆಚ್ಚಿದ ಹಿಂಗಾರು ಮೇಲಿನ ನಿರೀಕ್ಷೆ

| Published : Oct 12 2023, 12:00 AM IST

ಮುಂಗಾರಿನಲ್ಲಿ ಶೇ.37 ಮಳೆ ಕೊರತೆ: ಹೆಚ್ಚಿದ ಹಿಂಗಾರು ಮೇಲಿನ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಜನವರಿಯಿಂದ ಅ.4ರವರೆಗೆ ವಾಡಿಕೆ ಮಳೆ 2153 ಮಿಮೀ । ಈ ಬಾರಿ ಸುರಿದಿದ್ದು ಕೇವಲ 1355 ಮಿ.ಮೀ. ಮಳೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮುಂಗಾರು ಮಳೆ ಅವಧಿ ಪೂರ್ಣಗೊಂಡಿದ್ದು, ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲೇ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.37ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಕೊರತೆಯಿಂದ ಕಂಗೆಟ್ಟಿರುವ ರೈತರು ಈಗ ಹಿಂಗಾರ ಮಳೆಯಾದರೂ ಉತ್ತಮವಾಗಿ ಸುರಿಯುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನೆರೆ ಹಾನಿಯಾಗಿದ್ದೇ ಹೆಚ್ಚು. ಆದರೆ, ಈ ಬಾರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲಪೀಡಿತ ಪ್ರದೇಶದ ಎಂದು ಘೋಷಣೆ ಮಾಡುವಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಮಳೆಗೆ ಮೈದುಂಬಿ ಹರಿಯುತ್ತಿದ್ದ ನದಿಗಳು ಈ ಬಾರಿ ಮಳೆಗಾಲದಲ್ಲೇ ನೀರಿನ ಕೊರತೆ ಅನುಭವಿಸಿವೆ. ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ನೀರಿಲ್ಲದೇ ಒಣಗಿ ನಿಂತಿವೆ. ಮಳೆಗಾಲದಲ್ಲಿ ಈ ಪಾಟಿ ಮಳೆ ಕೊರತೆ ಎದುರಾಗಿರುವುದರಿಂದ ಮುಂದೆ ಬೆಳೆ, ಬದುಕಿನ ಪಾಡೇನು ಎಂದು ಜನತೆ ಮುಗಿಲು ನೋಡುತ್ತಿದ್ದಾರೆ. ಶೇ.37ರಷ್ಟು ಮಳೆ ಕೊರತೆ: ರಾಜ್ಯದಲ್ಲೇ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಮುಂಗಾರು ಹಂಗಾಮಿನಲ್ಲಿ ಧಾರಾಕಾರ ಸುರಿಯುತ್ತ ಮಳೆ ಈ ಬಾರಿ ಧರೆಗೆ ಇಳಿಯುವುದಕ್ಕೆ ಹಿಂದೇಟು ಹಾಕಿದೆ. ಜಿಲ್ಲೆಯಲ್ಲಿ ಜನವರಿಯಿಂದ ಅ.4ರವರೆಗೆ 2153 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಕೇವಲ 1355 ಮಿ.ಮೀ. ಮಳೆಯಾಗಿದೆ. ಶೇ.37ರಷ್ಟು ಈ ಬಾರಿ ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈವರೆಗೆ ಭದ್ರಾವತಿಯಲ್ಲಿ ಶೇ.31, ಹೊಸನಗರದಲ್ಲಿ ಶೇ.31, ಸಾಗರದಲ್ಲಿ ಶೇ.10, ಶಿಕಾರಿಪುರದಲ್ಲಿ ಶೇ.31. ಶಿವಮೊಗ್ಗದಲ್ಲಿ ಶೇ.20, ಸೊರಬದಲ್ಲಿ ಶೇ.39, ತೀರ್ಥಹಳ್ಳಿಯಲ್ಲಿ ಶೇ.35ರಷ್ಟು ಮಳೆ ಕೊರತೆಯಾಗಿದೆ. ಹಿಂಗಾರಿನತ್ತ ಹೆಚ್ಚಿದ ನಿರೀಕ್ಷೆ: ಈ ಬಾರಿ ಮುಂಗಾರು ಪೂರ್ವ ಮಳೆಯೂ ಸರಿಯಾಗಿ ಆಗದ ಕಾರಣ ಜಿಲ್ಲೆಯಲ್ಲಿ ರೈತರು ಬಿತ್ತನೆ ಮಾಡುವುದು ವಿಳಂಬವಾಗಿತ್ತು. ತಡವಾಗಿ ಆರಂಭಗೊಂಡ ಮುಂಗಾರು ಮಳೆಯನ್ನು ನೆಚ್ಚಿಕೊಂಡಿರುವ ಮೆಕ್ಕೆಜೋಳ, ಬತ್ತ ಬಿತ್ತನೆ ಮಾಡಿದ ರೈತರು ಈಗ ನೀರಿಗಾಗಿ ಪರದಾಡುವ ಸ್ಥಿತಿ ಉಲ್ಬಣಿಸಿದೆ. ನದಿ ಪ್ರದೇಶ. ನಾಲೆಗಳ ನೀರು, ಕೆರೆ ನೀರಿನ ಸೌಲಭ್ಯ ಇದ್ದವರು ನೀರು ಹಾಯಿಸಿ, ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹಲವೆಡೆ ಬೆಳೆಗೆ ಸರಿಯಾಗಿ ನೀರು ಸಿಗದ ಕಾರಣ ಬೆಳೆಗಳು ಬಾಡುತ್ತಿವೆ. ಮಳೆಗಾಲದಲ್ಲೇ ಬೆಳೆಗಳಿಗೆ ನೀರಿಗಾಗಿ ಬಡಿದಾಡುವ ಪರಿಸ್ಥಿತಿ ಇದೆ. ಇನ್ನು ಹಿಂಗಾರಿನಲ್ಲೂ ಮಳೆ ಕೊರತೆಯಾದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಲಿದೆ ಎಂಬುದು ಹಲವರ ಅಭಿಪ್ರಾಯ. - - - ಬಾಕ್ಸ್‌-1 ಬತ್ತ, ಮೆಕ್ಕೆಜೋಳ ನಷ್ಟ ವಿವರ ಮುಂಗಾರು ಅವಧಿಯಲ್ಲಿ ಒಟ್ಟು 79131 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ಕೊರತೆ ನಡುವೆಯೂ ಮಳೆಯಾಶ್ರಿತ, ನೀರಾವರಿ ಸೇರಿ ಒಟ್ಟು 72,135 ಹೆಕ್ಟೇರ್‌ ಪ್ರದೇಶದಲ್ಲಿ ಬತ್ತ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ 41529 ಹೆಕ್ಟೇರ್‌ನಲ್ಲಿನ ಭತ್ತದ ಬೆಳೆ ನಷ್ಟವಾಗಿದೆ. ತೀರ್ಥಹಳ್ಳಿಯಲ್ಲಿ 7200 ಹೆಕ್ಟೇರ್, ಸಾಗರ 10511 ಹೆಕ್ಟೇರ್, ಶಿಕಾರಿಪುರ 3980 ಹೆಕ್ಟೇರ್, ಸೊರಬ 12738 ಹೆಕ್ಟೇರ್, ಹೊಸನಗರ 7020. ಶಿವಮೊಗ್ಗದಲ್ಲಿ 80 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ನೀರಿಲ್ಲದೆ ನಷ್ಟವಾಗಿದ್ದು, ಭದ್ರಾವತಿಯಲ್ಲಿ ಮಾತ್ರ ಬತ್ತಕ್ಕೆ ಯಾವುದೇ ಹಾನಿಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 44577 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಇದರಲ್ಲಿ 38240 ಹೆಕ್ಟೇರ್ ಮೆಕ್ಕೆಜೋಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 11420 ಹೆಕ್ಟೇರ್, ಭದ್ರಾವತಿ 586 ಹೆಕ್ಟೇರ್, ಸಾಗರ 1723 ಹೆಕ್ಟೇರ್, ಶಿಕಾರಿಪುರ 16210 ಹೆಕ್ಟೇರ್, ಸೊರಬ 7912 ಹೆಕ್ಟೇರ್, ಹೊಸನಗರ 388 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಮಳೆ, ನೀರಿಲ್ಲದೆ ನಷ್ಟಕ್ಕೆ ಒಳಗಾಗಿದ್ದು, ತೀರ್ಥಹಳ್ಳಿಯಲ್ಲಿ ಮೆಕ್ಕೆಜೋಳಕ್ಕೆ ಯಾವುದೇ ಹಾನಿಯಾಗಿಲ್ಲ. ಇನ್ನು ತೋಟಗಾರಿಕೆ ಬೆಳೆಗಳು ನಿರೀನ ಕೊರತೆಯಿಂದಾಗಿ ಈವರೆಗೆ ಯಾವುದೇ ಹಾನಿಯಾಗಿಲ್ಲ. - - - ಬಾಕ್ಸ್‌-2 ಭರ್ತಿಯಾಗದ ಜಲಾಶಯಗಳು ಕಳೆದ ಬಾರಿ ಮುಂಗಾರು ಮಳೆಗೆ ಮೈದುಂಬಿಕೊಂಡಿದ್ದ ಜಿಲ್ಲೆಯ ಪ್ರಮುಖ ಜಲಾಶಯಗಳು ಈ ಬಾರಿ ಜಲಾಶಯಗಳು ಭರ್ತಿಯಾಗಿಲ್ಲ. ಜುಲೈನಲ್ಲಿ ಸುರಿದ ಮಳೆಗೆ ತುಂಗಾ ಜಲಾಶಯ ಭರ್ತಿಯಾಗಿದ್ದು ಬಿಟ್ಟರೆ, ಲಿಂಗನಮಕ್ಕಿ, ಭದ್ರಾ, ಮಾಣಿ ಜಲಾಶಯಗಳು ಈವರೆಗೆ ಭರ್ತಿಯಾಗಿಲ್ಲ. ಕಳೆದ ಬಾರಿ ಈ ಹೊತ್ತಿಗೆ ಭದ್ರಾ ಜಲಾಶಯದ ಭರ್ತಿಯಾಗಿ ನಿರನ್ನು ಹೊರ ಬಿಡಲಾಗುತ್ತಿದೆ. ಆದರೆ, ಈ ಬಾರಿ ಶೇ.56ರಷ್ಟು ಮಾತ್ರ ನೀರಿದೆ. ಈ ಕಳೆದ ವರ್ಷ ಈ ಹೊತ್ತಿಗೆ ಶೇ.90ರಷ್ಟು ಭರ್ತಿಯಾಗಿದ್ದ ಲಿಂಗನಮಕ್ಕಿ ಜಲಾಶಯದಲ್ಲಿ ಈ ಬಾರಿ ಶೇ.45ರಷ್ಟು ಮಾತ್ರ ನೀರಿದೆ. ಹಿಂಗಾರಿನಲ್ಲೂ ಉತ್ತಮ ಮಳೆ ಆಗದಿದ್ದರೆ ಜಲಾಶಯಗಳ ಮಟ್ಟ ಡೆಡ್‌ ಸ್ಟೋರೆಜ್‌ ತಲುಪುವ ಸಾಧ್ಯತೆ ಇದೆ. - - - (-ಫಾರ್ಮರ್‌.ಜೆಪಿಜಿ:) ಸಾಂದರ್ಭಿಕ ಚಿತ್ರ