ದಾವಣಗೆರೆ ಜಿಲ್ಲೆಯಲ್ಲಿ ನೆಲ ಮತ್ತು ಜಲ ಸಂಪನ್ಮೂಲಗಳ ಸಂರಕ್ಷಣೆ, ಕೆರೆ ಹಾಗೂ ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಪಹಣಿ ಇಂಡೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
- ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಕಟ್ಟುನಿಟ್ಟಿನ ಸೂಚನೆ । ವಿಳಂಬ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಜಿಲ್ಲೆಯಲ್ಲಿ ನೆಲ ಮತ್ತು ಜಲ ಸಂಪನ್ಮೂಲಗಳ ಸಂರಕ್ಷಣೆ, ಕೆರೆ ಹಾಗೂ ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಪಹಣಿ ಇಂಡೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗುರುವಾರ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ನೆಲ-ಜಲ ಮತ್ತು ಮಳೆನೀರು ಕೊಯ್ಲು ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆಲ-ಜಲ ವಿಷಯವು ಸಣ್ಣ ಮತ್ತು ಬೃಹತ್ ನೀರಾವರಿ, ಕಂದಾಯ, ಕುಡಿಯುವ ನೀರು ಸರಬರಾಜು ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಮೂಲಭೂತ ಕರ್ತವ್ಯವಾಗಿದೆ. ಸಭೆಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗಬಾರದು. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ವಿಳಂಬ ಧೋರಣೆ ಮುಂದುವರಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಹುಚ್ಚವ್ವನಹಳ್ಳಿ ಕೆರೆಯ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದರೂ ಇಂದಿನವರೆಗೂ ಪಹಣಿ ಇಂಡೀಕರಣ ಆಗದಿರುವ ಬಗ್ಗೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ಆದೇಶಿಸಿ ತಿಂಗಳು ಕಳೆದರೂ ವಿಳಂಬ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯಲೋಪ ಎಸಗಿರುವ ರೆವಿನ್ಯೂ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮತ್ತು ಸಂಬಂಧಪಟ್ಟ ತಹಸೀಲ್ದಾರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಆದೇಶಿಸಿದರು.
''''ನಲ್ಲುಕುದುರೆ'''' ಕೆರೆ ಒತ್ತುವರಿ ತೆರವು ಮತ್ತು ಇಂಡೀಕರಣ ಪ್ರಕ್ರಿಯೆ ತ್ವರಿತಗೊಳಿಸಲು ಸೂಚಿಸಲಾಯಿತು. ಸೂಳೆಕೆರೆ ವ್ಯಾಪ್ತಿಯಲ್ಲಿನ ಒತ್ತುವರಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಮಗ್ರ ವರದಿ ರವಾನಿಸಲು ನಿರ್ದೇಶಿಸಲಾಯಿತು. ಕೆರೆ ಮತ್ತು ಜಲಮೂಲಗಳ ಒತ್ತುವರಿ ತೆರವುಗೊಳಿಸದಿದ್ದರೆ ಲೋಕಾಯುಕ್ತ ಸಂಸ್ಥೆ ಹಾಗೂ ನ್ಯಾಯಾಲಯಗಳು ''''ಸುಮೊಟೊ'''' ಕೇಸ್ ದಾಖಲಿಸುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳು ವರ್ಗಾವಣೆಯಾಗಿ ಬೇರೆಡೆಗೆ ಹೋದರೂ, ಹಳೆಯ ವಿಫಲತೆಗಳಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಆಶ್ರಯ ಯೋಜನೆಯಡಿ ಜಾಗ ಹಂಚಿಕೆಯಾಗಿ ಕಂದಾಯ ಗ್ರಾಮ/ ಆಶ್ರಯ ಕಾಯ್ದಿರಿಸಲಾದ ಸ್ಥಳಗಳ ತೆರವು ವಿಚಾರದಲ್ಲಿ, ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಕಳೆದ ತಿಂಗಳು 6.9 ಮೀಟರ್‌ನಷ್ಟಿದ್ದ ಅಂತರ್ಜಲ ಮಟ್ಟವು ಪ್ರಸ್ತುತ 7.1 ಮೀಟರ್‌ಗೆ ಕುಸಿದಿರುವುದು ಅಪಾಯಕಾರಿ ಮುನ್ಸೂಚನೆಯಾಗಿದೆ. ರೈತರು ಹೊಲಗಳಲ್ಲಿ ಬದುಗಳನ್ನು ನಿರ್ಮಿಸಿ ಮಳೆನೀರು ಕೊಯ್ಲು ಹಾಗೂ ನೀರು ಮರುಪೂರಣ (ರಿಚಾರ್ಜ್) ಕ್ರಮಗಳನ್ನು ಕೈಗೊಳ್ಳಬೇಕು.ಸರ್ಕಾರಿ ಕಚೇರಿಗಳು, ವಸತಿಗೃಹಗಳು, ಪೊಲೀಸ್ ಠಾಣೆಗಳು, ನೂತನ ವಸತಿ ಶಾಲೆಗಳು ಹಾಗೂ ಉದ್ಯಾನವನಗಳಲ್ಲಿ ಇಂಗುಗುಂಡಿ ನಿರ್ಮಿಸಿ ನೀರು ಶೇಖರಣೆ ಮಾಡುವುದು ಕಡ್ಡಾಯ. ಹೊಸ ಕಟ್ಟಡಗಳಿಗೆ ಅಂತಿಮ ''''ಒಸಿ'''' ನೀಡುವ ಮುನ್ನ ಮಳೆನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದರು.
40 ರಿಂದ 50 ಮನೆಗಳ ಮಳೆನೀರು ಕೊಯ್ಲು ಘಟಕಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ''''ಜಲಶಕ್ತಿ ಅಭಿಯಾನ'''' ವೆಬ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಕೆರೆಗಳ ಸುತ್ತಮುತ್ತ ಹಾಗೂ ಅಂತರ್ಜಲ ವಲಯಗಳಲ್ಲಿ ಅನುಮತಿ ಇಲ್ಲದೆ ಬೋರ್‌ವೆಲ್ ಕೊರೆಯುವುದು ಮತ್ತು ಕೆರೆ ಅಚ್ಚುಕಟ್ಟು ಪ್ರದೇಶ ಬಳಿ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ಕ್ರಮ ಕೈಗೊಳ್ಳಲು ತಹಸೀಲ್ದಾರ್‌ಗಳಿಗೆ ಸೂಚಿಸಿದರು.ಲೇಔಟ್‌ಗಳಲ್ಲಿ ಗಿಡಗಳನ್ನು ಸೈಟಿನ ಮೂಲೆಗಳಲ್ಲಿ ನೆಡಲು ಹಾಗೂ ಕಾಂಕ್ರೀಟ್/ ಟಾರ್ ರಸ್ತೆ ಕಟಿಂಗ್ ತಪ್ಪಿಸಲು ಪ್ರತಿ 200 ಮೀಟರ್‌ಗೆ 3 ಇಂಚಿನ ''''ಎಚ್‌ಡಿಪಿಇ'''' ಪೈಪ್‌ಗಳನ್ನು ಅಡ್ಡಲಾಗಿ ಹಾಕಿ ಎಂಡ್‌ಕ್ಯಾಪ್ ಅಳವಡಿಸಲು ಲೇಔಟ್ ಡೆವಲಪರ್‌ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದರು.
ಸಾರ್ವಜನಿಕರ ಸ್ಪಂದನೆ- ವಾರದ ಪರಿಶೀಲನೆ:ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಮತ್ತು ರೈತ ನಾಯಕರ ಕರೆಗಳನ್ನು ಸ್ವೀಕರಿಸಿ ಸೂಕ್ತ ಮಾಹಿತಿ ನೀಡಬೇಕು. ದೂರದ ಸ್ಥಳಗಳಿಗೆ ಜನರನ್ನು ಅಲೆಯುವಂತೆ ಮಾಡಬಾರದು. ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ತರಲು ಪ್ರತಿ ವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಾಮರ್ಶೆ ಸಭೆ ನಡೆಸುವುದಾಗಿ ತಿಳಿಸಿದರು.
ನೂತನ ಕೆರೆಗಳ ನಿರ್ಮಾಣ:ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ತಡೆಯಲು ಕೆರೆಗಳ ಜೀರ್ಣೋದ್ಧಾರ, ನೂತನ ಕೆರೆಗಳ ನಿರ್ಮಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಸೂಚಿಸಿದರು ಹೊಸದಾಗಿ ಯಲ್ಲೊನಹಳ್ಳಿ ಹೊಸ್ಕೆರೆ ಗಡಿಗುಡಾಳ್- ಕೊಡಚಗೊಂಡನಹಳ್ಳಿ ಮಲೆಬೆನ್ನೂರು ಸರ್ವೆ ನಂ.141 ಮತ್ತು 142 ಚನ್ನಗಿರಿ ದೊಡ್ಡೇರಿ ಕಟ್ಟೆಗಳಲ್ಲಿ ಹೊಸ ಕೆರೆಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ ಎಂದರು.
ಡಿಡಿಎಲ್ಆರ್ ಭಾಗ್ಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಚ್ಚವನಹಳ್ಳಿ ಮಂಜುನಾಥ್, ಪ್ರೊ. ಈಶ್ವರ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.- - -
-8ಕೆಡಿವಿಜಿ39:ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನೆಲ-ಜಲ ಮತ್ತು ಮಳೆನೀರು ಕೊಯ್ಲು ಕುರಿತ ಪರಿಶೀಲನಾ ಸಭೆ ನಡೆಯಿತು.