ಮೊಟ್ಟೆಯ ದರ ತೀವ್ರ ಏರಿಕೆಯಾಗಿದ್ದು, ಒಂದು ಮೊಟ್ಟೆಗೆ ₹8 ಇದೆ. ಹೀಗಾಗಿ ಸರ್ಕಾರ ಕೊಡುವ ಅನುದಾನ ಸಾಕಾಗದೇ ಹೆಚ್ಚುವರಿಯಾಗಿ ಹಣವನ್ನು ಕೈಯಿಂದ ಭರಿಸಬೇಕಾದ ಅನಿವಾರ್ಯ ಎದುರಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಪೌಷ್ಟಿಕತೆ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟದ ಜತೆ ಕೋಳಿಮೊಟ್ಟೆ ವಿತರಿಸಲಾಗುತ್ತಿದೆ. ಆದರೆ ಮೊಟ್ಟೆ ಧಾರಣೆ ದುಬಾರಿಯಾಗಿರುವುದರಿಂದ ಮುಖ್ಯ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ.

ಮುಂಡರಗಿ ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಟ್ಟು 125 ಸರ್ಕಾರಿ ಶಾಲೆಗಳಿವೆ. ಪ್ರತಿದಿನ ಸುಮಾರು 19178 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳು ಕಡಿಮೆ ಸಂಖ್ಯೆ ಇರುವ ಶಾಲೆಗಳನ್ನು ನಿಭಾಯಿಸಬಹುದು. ಆದರೆ 100ರಿಂದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಲೆಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ದಿನೇ ದಿನೇ ಏರಿಕೆಯಾಗುತ್ತಿರುವ ಮೊಟ್ಟೆ ಬೆಲೆ ಕಾರಣದಿಂದ ಸರ್ಕಾರ ನೀಡುವ ಅನುದಾನ ಸಾಲದೆ, ಹಲವೆಡೆ ಶಿಕ್ಷಕರು ತಮ್ಮ ಹಣ ಹಾಕಿ ಮೊಟ್ಟೆ ತರುವ ಪರಿಸ್ಥಿತಿ ಉಂಟಾಗಿದೆ.

₹8ಕ್ಕೆ ಒಂದು ಮೊಟ್ಟೆ: ಮೊಟ್ಟೆಯ ದರ ತೀವ್ರ ಏರಿಕೆಯಾಗಿದ್ದು, ಒಂದು ಮೊಟ್ಟೆಗೆ ₹8 ಇದೆ. ಹೀಗಾಗಿ ಸರ್ಕಾರ ಕೊಡುವ ಅನುದಾನ ಸಾಕಾಗದೇ ಹೆಚ್ಚುವರಿಯಾಗಿ ಹಣವನ್ನು ಕೈಯಿಂದ ಭರಿಸಬೇಕಾದ ಅನಿವಾರ್ಯ ಎದುರಾಗಿದೆ. ಶಿಕ್ಷಕರು ಹೋಲ್‌ಸೇಲ್ ದರದಲ್ಲಿ ದೂರದ ಪಟ್ಟಣ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ತರುವಾಗ ಮಾರ್ಗಮಧ್ಯೆ ಒಡೆದು ಹೋದರೆ ಅದರ ವೆಚ್ಚವನ್ನು ಶಿಕ್ಷಕರೇ ಭರಿಸಬೇಕು.

ಸರ್ಕಾರ ಬಾಳೆಹಣ್ಣು ಖರೀದಿಗೆ ₹6, ಮೊಟ್ಟೆಗೆ ₹6ರಂತೆ ನೀಡುತ್ತಿದೆ. ಅದರಲ್ಲಿ ಮೊಟ್ಟೆ ಖರೀದಿಯ ವೆಚ್ಚ ₹5, ಮೊಟ್ಟೆ ಬೇಯಿಸಲು ಗ್ಯಾಸ್ ವೆಚ್ಚ ₹50 ಪೈಸೆ, ಅಂಗಡಿಯಿಂದ ಶಾಲೆಗೆ ಮೊಟ್ಟೆ ತರಲು ಸಾಗಾಣಿಕೆ ವೆಚ್ಚ ₹20 ಪೈಸೆ ಹಾಗೂ ಮೊಟ್ಟೆ ಸುಲಿಯಲು ₹30 ಪೈಸೆ ಅಡುಗೆಯವರಿಗೆ ನೀಡಲಾಗುತ್ತಿದೆ. ಒಟ್ಟು ಒಂದು ಮೊಟ್ಟೆಗೆ ಸರ್ಕಾರ ನೀಡುವ ಮೊತ್ತ ₹6 ಆಗಿದೆ.

ಅಪೌಷ್ಟಿಕತೆ ನಿವಾರಣೆ: ರಾಜ್ಯದಲ್ಲಿ ಅಪೌಷ್ಟಿಕತೆ ನಿವಾರಣೆ ಹಾಗೂ ಶಾಲಾ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ. ಈ ಯೋಜನೆಯ ಮೂಲಕ ಸರ್ಕಾರ ನೀಡುವ ಅನುದಾನದಡಿ ಈ ಹಿಂದೆ ವಾರಕ್ಕೆ ಎರಡು ದಿನಗಳ ಕಾಲ ಮೊಟ್ಟೆ ನೀಡಲಾಗುತ್ತಿತ್ತು. 2024ರ ಸೆಪ್ಟೆಂಬರ್‌ ತಿಂಗಳಿನಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಹಕಾರದೊಂದಿಗೆ ವಾರಕ್ಕೆ ಆರು ದಿನಗಳ ಕಾಲ ಮೊಟ್ಟೆ ವಿತರಣೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಸೇವಿಸುವ ಆಯ್ಕೆಯನ್ನೂ ನೀಡಲಾಗಿದೆ.

ಪರಿಣಾಮಕಾರಿ: ಈ ಯೋಜನೆ ಬಹಳ ಪರಿಣಾಮಕಾರಿಯಾಗಿದೆ. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚು ಮಾಡುವಲ್ಲಿ ಸರ್ಕಾರ ಮಾಡಿರುವ ಉದ್ದೇಶ ಒಳ್ಳೆಯದೇ. ಆದರೆ ಅದನ್ನು ಜಾರಿ ಮಾಡಿರುವ ವಿಧಾನ ಶಿಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ.

ವಿದ್ಯಾರ್ಥಿಗಳಿಗೆ ಬೋಧನೆ ಜತೆಗೆ ಹೆಚ್ಚುವರಿಯಾಗಿ ಮೊಟ್ಟೆ ವಿತರಣೆಯ ಕಾಯಕವನ್ನೂ ಹೆಗಲ ಮೇಲೆ ಹಾಕಿಕೊಂಡಿರುವ ಶಿಕ್ಷಕರಿಗೆ ಬೆಲೆ ಏರಿಕೆಯಿಂದ ಮೊಟ್ಟೆಗಳ ವಿತರಣಾ ಕಾರ್ಯ ನಿಭಾಯಿಸುವುದೇ ಸವಾಲಾಗಿದೆ. ಕೆಲವು ಶಿಕ್ಷಕರಂತೂ ಬಿಸಿಯೂಟ ಜವಾಬ್ದಾರಿಯೇ ಬೇಡ ಎಂದು ಬೇರೆ ಶಿಕ್ಷಕರಿಗೆ ಹಸ್ತಾಂತರ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಮೊಟ್ಟೆ ಬೆಲೆ ಏರಿಕೆ ಆಗಿರುವುದರಿಂದ ಕೆಲವು ಶಾಲೆಗಳಲ್ಲಿ ಮೊಟ್ಟೆ ಬದಲಿಗೆ ಬಾಳೆಹಣ್ಣು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಕೈಯಿಂದ ಹಣ: ಮೊಟ್ಟೆಗಾಗಿಯೇ ನಿತ್ಯ ₹250ಕ್ಕೂ ಹೆಚ್ಚಿನ ಹಣವನ್ನು ಕೈಯಿಂದ ಭರಿಸಬೇಕಿದೆ. ಅಕಸ್ಮಾತ್ ಮೊಟ್ಟೆ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಮೇಲಧಿಕಾರಿಗಳಿಂದ ನೋಟಿಸ್ ಬರುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು ತಿಳಿಸಿದರು.

ಪ್ರಸ್ತಾವನೆ: ಮೊಟ್ಟೆಯ ಬೆಲೆ ಹೆಚ್ಚಿಸಿ ಪರಿಷ್ಕರಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಸಂಘಟನೆಯ ಮೂಲಕ ಮನವಿ ನೀಡಲಾಗಿದೆ. ಮೇಲಧಿಕಾರಿಗಳು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳುವ ಆಶಾಭಾವನೆ ಕೂಡ ಇದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಸ್.ವೈ. ವಿಭೂತಿ ತಿಳಿಸಿದರು.