ಸಾರಾಂಶ
- ಅಶೋಕ ನಗರ ಕ್ಯಾಂಪ್ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ । ಸಿಬ್ಬಂದಿಗೆ ತರಾಟೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುತ್ತಿರುವುದನ್ನು ಕಂಡು ಶಾಸಕ ಕೆ.ಎಸ್. ಬಸವಂತಪ್ಪ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ತರಾಟೆಗೆ ತೆಗೆದುಕೊಂಡರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಅಶೋಕ ನಗರ ಕ್ಯಾಂಪ್ ಅಂಗನವಾಡಿ ಕೇಂದ್ರಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಹೆಸರಿನಲ್ಲಿ ಏಜೆನ್ಸಿಯವರು ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಪೂರೈಸಿದ್ದಾರೆ. ಇಲ್ಲಿನ ಅವಧಿ ಮೀರಿದ ಆಹಾರದ ಪದಾರ್ಥಗಳೇ ಇದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಏಕೆ ತಂದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರನ್ನು ಶಾಸಕರು ಪ್ರಶ್ನಿಸಿದರು.
ಗ್ರಾಮೀಣ ಪ್ರದೇಶಗಳ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ತೊಗರಿ ಬೇಳೆ, ಹೆಸರು ಕಾಳು ಮತ್ತು ಮಿಶ್ರಿತ ಪೌಷ್ಠಿಕ ಆಹಾರದ ಪೊಟ್ಟಣಗಳ ಮೇಲೆ ಅವಧಿ ಮೀರಿದ ದಿನಾಂಕ ನಮೂದಾಗಿದೆ. ಆ ಪೊಟ್ಟಣಗಳಲ್ಲಿರುವ ಆಹಾರವನ್ನು ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಕೊಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಯಾರು ಹೊಣೆ ಎಂದು ಕಿಡಿಕಾರಿದರು.ಗುತ್ತಿಗೆ ಪಡೆದ ಏಜೆನ್ಸಿಗಳು ಗುಣಮಟ್ಟದ ಆಹಾರ ಪೊಟ್ಟಣಗಳನ್ನು ಪೂರೈಸುತ್ತಿವೆಯೋ ಅಥವಾ ಇಲ್ಲವೋ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಆಗಾಗ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು. ಆದರೆ ಅವರು ಕೂಡ ಅಂಗನವಾಡಿ ಕೇಂದ್ರಗಳಿಗೂ ನಮಗೂ ಸಂಬಂಧವಿಲ್ಲ ಎಂಬಂತೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪರಿಣಾಮ ದಾಸ್ತಾನು ಇದ್ದ ಕಳಪೆ ಆಹಾರ ಪದಾರ್ಥಗಳನ್ನೇ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ವಿತರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗರ್ಭಿಣಿಯರಿಗೆ ಪ್ರತಿನಿತ್ಯ ಮೊಟ್ಟೆ ವಿತರಿಸಬೇಕು. ಆದರೆ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಹಣ ಹಾಕಿಲ್ಲ ಎಂದು ಒಂದು ತಿಂಗಳಿನಿಂದ ಮೊಟ್ಟೆ ಕೊಟ್ಟಿಲ್ಲ. ಈ ಬಗ್ಗೆ ಗ್ರಾಮಸ್ಥರಿಂದ ದೂರು ಬಂದಿತ್ತು, ಇದು ಆಗಬಾರದು. ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆಗಳನ್ನು ಕಡ್ಡಾಯವಾಗಿ ಅಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲದಿದ್ದರೆ ನಮ್ಮ ಗಮನಕ್ಕೆ ತಂದರೆ ಪರಿಹಾರ ಕ್ರಮ ತೆಗೆದುಕೊಳ್ಳಬಹುದು. ಇನ್ಮುಂದೆ ಇಂತಹ ಘಟನೆಗಳು ನಡೆದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು ಎಂದೂ ಸೂಚನೆ ನೀಡಿದರು.- - - -26ಕೆಡಿವಿಜಿ 39, 40:
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಅಶೋಕ ನಗರ ಕ್ಯಾಂಪ್ ಅಂಗನವಾಡಿ ಕೇಂದ್ರಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.